ಸಚಿವ ಸಂಪುಟ ಸಭೆಯಲ್ಲಿ ರೈತ ಪರ ನಿರ್ಣಯ ಕೈಗೊಳ್ಳಲು ಚರ್ಚಿಸಿ: ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಶೆಟ್ಟಿ
ಮಂಗಳೂರಿನಲ್ಲಿ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ, ರೈತ ಪರವಾದ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಶೆಟ್ಟಿ ಆಗ್ರಹಿಸಿದರು.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಜಾರಿಯಾದರೆ ವರದಿ ವ್ಯಾಪ್ತಿಯಲ್ಲಿರುವ ರೈತಾಪಿ ಜನಾಂಗ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ವರದಿಯ ಕುರಿತು ಸಮಗ್ರವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಅಗತ್ಯವಿದೆ ಎಂದರು.
ವಾರಾಹಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ರೈತರಿಗೆ ಕಬ್ಬು ಬೆಳೆಯಲು ಅವಕಾಶ ಕಲ್ಪಿಸಬೇಕು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರ್ ಸ್ಥಾಪಿಸಲು ಮುಂದಿನ ಬಜೆಟ್‌ನಲ್ಲಿ 100 ಕೋಟಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಪ್ರತಿ ತಾಲೂಕಿನಲ್ಲಿ ಸುಸಜ್ಜಿತವಾದ ವಿಶಾಲ ರೈತರ ಫಸಲು ವಿಮೆಯೊಂದಿಗೆ ದಾಸ್ತಾನು ಗೋದಾಮು ನಿರ್ಮಿಸಬೇಕು. ನಮೂನೆ 50, 53, 57, 94ಸಿ ಹಾಗೂ 94ಸಿಸಿ ಅಡಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಪಹಣಿ ಪತ್ರದಲ್ಲಿ ಅಗತ್ಯ ದಾಖಲಾತಿ ಮಾಡಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಿರುವ ಉಳಿಕೆ ಡಿ.ಸಿ. ಮನ್ನಾ ಭೂಮಿಯನ್ನು ಅರ್ಹರಿಗೆ ಹಂಚಿಕೆ ಮಾಡಬೇಕು. ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು. ಯುಪಿಸಿಎಲ್ ವಿದ್ಯುತ್ ಕಂಪೆನಿಯಿಂದ ರೈತರಿಗೆ ಆಗುತ್ತಿರುವ ತೊಂದರೆಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದರು.
ಧಾರ್ಮಿಕ ಇಲಾಖೆಯ ಬಿ ಮತ್ತು ಸಿ ವರ್ಗದ ದೇವಾಲಯಗಳಿಗೆ ಕಾಯಕಲ್ಪ ನೀಡಬೇಕು. ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ವಿಶೇಷ ಬಜೆಟ್ ಹಾಗೂ ಹೆಚ್ಚಿನ ಅನುದಾನ ನೀಡಬೇಕು ಎಂದು ಶಶಿಧರ್ ಶೆಟ್ಟಿ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ನ ಭಾಸ್ಕರ್ ಶೆಟ್ಟಿ, ಉಪಾಧ್ಯಕ್ಷ ಶೇಖರ್ ಕೋಟ್ಯಾನ್, ಕಾರ್ಯದರ್ಶಿ ರಾಯ್ಸ್ ಮರ್ವಿನ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಶೆಟ್ಟಿ ಕೀಳಿಂಜೆ ಉಪಸ್ಥಿತರಿದ್ದರು.