ಸಾಕ್ಷರತಾ ಮಾಸಾಚರಣೆ: ಸರಕಾರಿ ಶಾಲಾ ಗ್ರಂಥಾಲಯಗಳಿಗೆ ಪುಸ್ತಕಗಳ ಕೊಡುಗೆ
ಸಾಕ್ಷರತಾ ಮಾಸಾಚರಣೆಯ ಅಂಗವಾಗಿ ರೋಟರಿ ಐಸಿರಿ ಪರ್ಕಳ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಸರಕಾರಿ ಸಂಯುಕ್ತ ಪ್ರೌಢಶಾಲೆ ಶೆಟ್ಟಿಬೆಟ್ಟು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ‘ಮನೆಯೇ ಗ್ರಂಥಾಲಯ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದ್ದು, 220ಕ್ಕೂ ಅಧಿಕ ಗ್ರಂಥಾಲಯಗಳನ್ನು ರೂಪಿಸಿ ಪುಸ್ತಕಗಳನ್ನು ನೀಡಲಾಗಿದೆ. ಶಾಲೆಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಐಸಿರಿ ಪರ್ಕಳ ಅಧ್ಯಕ್ಷ ಸಂದೀಪ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಹಾಗೂ ಕಾರ್ಯದರ್ಶಿ ರಾಜೇಶ್ ಡಿ. ಶೆಣೈ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕರಾದ ರಾಮಕೃಷ್ಣ ನಾಯಕ್ ಹಾಗೂ ಸರಸ್ವತಿ ಅವರು ಪುಸ್ತಕಗಳ ಕೊಡುಗೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಐಸಿರಿ ಪರ್ಕಳಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಸಾಪ ಉಡುಪಿ ಘಟಕದ ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್, ‘ಮನೆಯೇ ಗ್ರಂಥಾಲಯ’ ಅಭಿಯಾನ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು, ದೀಪಾ ಕರ್ಕಿ, ರೋಟರಿ ಲೀಡರ್‌ಶಿಪ್ ಇನ್‌ಸ್ಟಿಟ್ಯೂಟ್ ಜಿಲ್ಲಾ ಸಭಾಪತಿ ಮಂಜುನಾಥ ಉಪಾಧ್ಯ, ಉಪಾಧ್ಯಕ್ಷ ಕೆ. ಪ್ರಕಾಶ್ ಶೆಣೈ, ಕ್ರೀಡಾ ಸಂಯೋಜಕ ಅಶೋಕ್ ನಾಯಕ್ ಹಾಗೂ ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.