ಕಿನ್ನಿಮೂಲ್ಕಿ ಧೂಮ್ರವರ್ಣ ಗಣೇಶನ ಅದ್ಧೂರಿ ಶೋಭಾಯಾತ್ರೆ: ಕಣ್ವಪುಷ್ಕರಿಣಿಯಲ್ಲಿ ಜಲಸ್ತಂಭನ
Thursday, September 24, 2026
ಕಳೆದ ಹತ್ತು ದಿನಗಳಿಂದ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಕಿನ್ನಿಮೂಲ್ಕಿಯ ಗಣಪತಿ ಕಟ್ಟೆಯಲ್ಲಿ ಪೂಜಿಸಲ್ಪಡುತ್ತಿದ್ದ ಧೂಮ್ರವರ್ಣದ ಗಣೇಶನ ವಿಸರ್ಜನಾ ಶೋಭಾಯಾತ್ರೆ ಬುಧವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಗಣೇಶನ ವೈಭವದ ವಿಸರ್ಜನಾ ಮೆರವಣಿಗೆಗೆ ಸಾಕ್ಷಿಯಾದರು.
ರಾತ್ರಿ 7ರಿಂದ 7.30ರ ಸುಮಾರಿಗೆ ಗಣೇಶನಿಗೆ ಮಹಾ ಮಂಗಳಾರತಿ ಬೆಳಗಿದ ಬಳಿಕ ಆಕರ್ಷಕವಾಗಿ ಅಲಂಕರಿಸಲಾಗಿದ್ದ ವಾಹನದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಆರಂಭಗೊಂಡ ಶೋಭಾಯಾತ್ರೆಯುದ್ದಕ್ಕೂ ‘ಗಣಪತಿ ಬಪ್ಪಾ ಮೋರೆಯಾ’ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.
ಕನ್ನರ್ಪಾಡಿಯಿಂದ ಫಯರ್‌ಸ್ಟೇಷನ್ ರಸ್ತೆ, ಬ್ರಹ್ಮಗಿರಿ ವೃತ್ತ, ಜೋಡುಕಟ್ಟೆ–ಕಿನ್ನಿಮೂಲ್ಕಿ ಮುಖ್ಯರಸ್ತೆ ಮೂಲಕ ಸಾಗಿದ ಮೆರವಣಿಗೆ ಬಲಾಯಿಪಾದೆ, ಸ್ವಾಗತ ಗೋಪುರ ಮಾರ್ಗವಾಗಿ ಮತ್ತೆ ಕನ್ನರ್ಪಾಡಿಗೆ ತಲುಪಿತು. ಮೆರವಣಿಗೆಯ ಪ್ರಮುಖ ಜಂಕ್ಷನ್‌ಗಳಲ್ಲಿ ಕೆಲಹೊತ್ತು ಕ್ರೇನ್‌ನ ಸಹಾಯದಿಂದ ಕೃಷ್ಣಮೂರ್ತಿ ಆಚಾರ್ಯ ಅವರು ಗಣೇಶನ ವಿಗ್ರಹಕ್ಕೆ ಪುಷ್ಪವೃಷ್ಟಿ ನೆರವೇರಿಸಿದರು.
ಶ್ರೀರಾಮ, ಅಯ್ಯಪ್ಪ, ಹನುಮಾನ್ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಬಿಂಬಿಸುವ ಕಲಾಕೃತಿಗಳು ಮತ್ತು ಆಕರ್ಷಕ ಟ್ಯಾಬ್ಲೋಗಳು ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿದವು. ಡಿಜೆ ಹಾಗೂ ವಿವಿಧ ವಾದ್ಯಗಳ ಸದ್ದಿಗೆ ಯುವಕ-ಯುವತಿಯರು ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು. ರಸ್ತೆಯುದ್ದಕ್ಕೂ ಸೇರಿದ್ದ ಭಕ್ತರು ಹಾಗೂ ಸಾರ್ವಜನಿಕರು ಗಣೇಶನ ದರ್ಶನ ಪಡೆದು ಭಕ್ತಿಭಾವ ಮೆರೆದರು.
ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಗಣೇಶನ ವಿಸರ್ಜನಾ ಶೋಭಾಯಾತ್ರೆ ಕಿನ್ನಿಮೂಲ್ಕಿಯ ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂತು.
ಅಂತಿಮವಾಗಿ ಮಧ್ಯರಾತ್ರಿ 12.12ರ ಸುಮಾರಿಗೆ ಕನ್ನರ್ಪಾಡಿಯ ಶ್ರೀ ಜಯದುರ್ಗಾಪರಮೇಶ್ವರಿ ದೇವಳದ ಕಣ್ವ ಪುಷ್ಕರಣಿಯಲ್ಲಿ ಧೂಮ್ರವರ್ಣ ಗಣೇಶನ ವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು.

.jpeg)


