-->
ಕೃಷ್ಣನೂರಿನಲ್ಲಿ ಹುಲಿವೇಷ, ಜಾನಪದ ವೈಭವದೊಂದಿಗೆ   ಅದ್ದೂರಿ ವಿಟ್ಲಪಿಂಡಿ ಉತ್ಸವ ಸಂಪನ್ನ

ಕೃಷ್ಣನೂರಿನಲ್ಲಿ ಹುಲಿವೇಷ, ಜಾನಪದ ವೈಭವದೊಂದಿಗೆ ಅದ್ದೂರಿ ವಿಟ್ಲಪಿಂಡಿ ಉತ್ಸವ ಸಂಪನ್ನ


ಪೊಡವಿಗೊಡೆಯ ಶ್ರೀಕೃಷ್ಣನೂರಾದ ಉಡುಪಿಯಲ್ಲಿ ವಿಟ್ಲಪಿಂಡಿ ಮಹೋತ್ಸವ ಶನಿವಾರ ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿಭಾವದಿಂದ ನೆರವೇರಿತು.


ಸಂಜೆ ಸುಮಾರು 3 ಗಂಟೆಗೆ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕರೆತಂದು ಚಿನ್ನದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಪರ್ಯಾಯ ಶಿರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ವಿಶೇಷ ಪೂಜೆ ನೆರವೇರಿಸಿ, ನಾರಿಕೇಳ ಹಾಗೂ ಕದಳಿ ಫಲಗಳನ್ನು ಅರ್ಪಿಸಿ ಮಂಗಳಾರತಿ ಬೆಳಗಿದರು. ಬಳಿಕ ಚಿನ್ನದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ಪರ್ಯಾಯ ಶಿರೂರು ಶ್ರೀಗಳೊಂದಿಗೆ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು, ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.


ರಥಬೀದಿಯ ಸುತ್ತಲೂ ನಿರ್ಮಿಸಲಾದ ಎತ್ತರದ ಮರದ ಗೋಪುರಗಳಿಗೆ ಕಟ್ಟಲಾದ ಮೊಸರು, ಹಾಲು ಮತ್ತು ಬಣ್ಣದ ನೀರಿರುವ ಮಡಕೆಗಳನ್ನು ಗೊಲ್ಲವೇಶಧಾರಿಗಳು ಕೋಲುಗಳಿಂದ ಒಡೆಯುತ್ತ ಮುಂದೆ ಸಾಗಿದರು.

ಉಡುಪಿ ಶ್ರೀಕೃಷ್ಣ ಮಠದ ಗೋಶಾಲೆಯಲ್ಲಿ ನಿತ್ಯವೂ ಸೇವೆ ಸಲ್ಲಿಸುವ ಸಿಬ್ಬಂದಿಗಳು ಗೋಪಾಲಕರ ವೇಷ ಧರಿಸಿ ಮಡಕೆ ಒಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸುಮಾರು ನಲವತ್ತಕ್ಕೂ ಅಧಿಕ ಹುಲಿವೇಷ ತಂಡಗಳು ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ರಥಬೀದಿಯಲ್ಲಿ ಪ್ರದರ್ಶನ ನೀಡಿ ವಿಟ್ಲಪಿಂಡಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.




ಶ್ರೀಕೃಷ್ಣ ಮಠದ ರಥಬೀದಿಗೆ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಮೃಣ್ಮಯ ಮೂರ್ತಿಗೆ ವಿಸರ್ಜನಾ ಪೂಜೆ ನೆರವೇರಿಸಲಾಯಿತು. ಅನಂತರ ಮಧ್ವ ಸರೋವರದಲ್ಲಿ ಜಲಸ್ತಂಭನ ವಿಧಿ ನೆರವೇರಿಸುವ ಮೂಲಕ ವಿಟ್ಲಪಿಂಡಿ ಮಹೋತ್ಸವಕ್ಕೆ ಅದ್ದೂರಿಯ ತೆರೆ ಎಳೆಯಲಾಯಿತು.

Ads on article

Advertise in articles 1

advertising articles 2

Advertise under the article