-->
 ಹೆತ್ತ ತಾಯಿಯನ್ನು ದಾರಿ ಮಧ್ಯೆ ಬಿಟ್ಟು ಹೋದ ಪಾಪಿ ಮಗ

ಹೆತ್ತ ತಾಯಿಯನ್ನು ದಾರಿ ಮಧ್ಯೆ ಬಿಟ್ಟು ಹೋದ ಪಾಪಿ ಮಗ


ಹೆತ್ತ ತಾಯಿಯ ಕೈಹಿಡಿದು ಬದುಕಿನ ದಾರಿ ತೋರಬೇಕಾದ ಮಗನೇ, ವೃದ್ಧ ತಾಯಿಯನ್ನು ದಾರಿ ಮಧ್ಯೆ ಬಿಟ್ಟು ತೆರಳಿರುವ ಅಮಾನವೀಯ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ಬ್ರಹ್ಮಾವರದ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಸಮೀಪ ವೃದ್ಧೆಯೊಬ್ಬರು ದಿಕ್ಕು ತೋಚದೆ, ಯಾರ ನೆರವೂ ಇಲ್ಲದೆ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶೆಣೈ ಗಮನಿಸಿದ್ದಾರೆ. ತಕ್ಷಣವೇ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ನಿತ್ಯಾನಂದ ಒಳಕಾಡು ಅವರು 112 ತುರ್ತು ಪೊಲೀಸ್ ಸಹಾಯವಾಣಿ ಸಿಬ್ಬಂದಿಯ ನೆರವಿನೊಂದಿಗೆ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ದಾಖಲು ಪ್ರಕ್ರಿಯೆ ವೇಳೆ ವೃದ್ಧೆ ತನ್ನ ಹೆಸರು ಸರಸ್ವತಿ (70) ಎಂದು ಹಾಗೂ ತಮಿಳುನಾಡಿನ ತಿರುವಳ್ಳುವೂರು ನಿವಾಸಿ ಎಂದು ತಿಳಿಸಿದ್ದಾರೆ. ತನ್ನ ಮಗ ಕಾರಿನಲ್ಲಿ ಕರೆದುಕೊಂಡು ಬಂದು, ಬಳಿಕ ಇಲ್ಲಿ ಬಿಟ್ಟು ತೆರಳಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ.

ವೃದ್ಧಾಪ್ಯದಲ್ಲಿ ಮಕ್ಕಳ ಆಸರೆ, ಪ್ರೀತಿ ಹಾಗೂ ಆರೈಕೆಯ ಅಗತ್ಯವಿರುವ ಸಂದರ್ಭದಲ್ಲಿ ಹೆತ್ತ ತಾಯಿಯನ್ನೇ ಹೀಗೆ ಅನಾಥಳಂತೆ ಬಿಟ್ಟು ಹೋಗಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ. ಮಗನನ್ನು ನಂಬಿ ಬಂದಿದ್ದ ವೃದ್ಧೆ, ಪರಿಚಯವಿಲ್ಲದ ಊರಿನಲ್ಲಿ ದಿಕ್ಕು ತೋಚದೆ ನಿಂತಿರುವ ದೃಶ್ಯ ನೋಡುಗರ ಮನಕಲಕುವಂತಿತ್ತು.

ಘಟನೆಯ ಕುರಿತು ನಿತ್ಯಾನಂದ ಒಳಕಾಡು ಅವರು ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ. ವೃದ್ಧೆಯ ಕುಟುಂಬದವರನ್ನು ಪತ್ತೆಹಚ್ಚಿ, ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

Ads on article

Advertise in articles 1

advertising articles 2

Advertise under the article