-->
ಬದುಕಿನ ಸಂಜೆಯಲ್ಲೂ ವಯಸ್ಸು ಮರೆಸಿದ ಉತ್ಸಾಹ: ಅಜ್ಜರಕಾಡು ಕ್ರೀಡಾಂಗಣದಲ್ಲಿ ಹಿರಿಯರ ಹಬ್ಬ

ಬದುಕಿನ ಸಂಜೆಯಲ್ಲೂ ವಯಸ್ಸು ಮರೆಸಿದ ಉತ್ಸಾಹ: ಅಜ್ಜರಕಾಡು ಕ್ರೀಡಾಂಗಣದಲ್ಲಿ ಹಿರಿಯರ ಹಬ್ಬ


ಬಿಳಿ ಕೂದಲು, ಮುಖದ ಮೇಲೆ ವಯಸ್ಸಿನ ಗೆರೆಗಳು, ನಿಧಾನವಾದ ಹೆಜ್ಜೆಗಳು... ಆದರೆ ಮನಸ್ಸಿನಲ್ಲಿ ಮಾತ್ರ ಅದೇ ಚೈತನ್ಯ, ಉತ್ಸಾಹ ಮತ್ತು ಬದುಕಿನ ಮೇಲಿನ ಪ್ರೀತಿ. ವಯಸ್ಸು ದೇಹಕ್ಕೆ ಮಾತ್ರ, ಮನಸ್ಸಿನ ಉತ್ಸಾಹಕ್ಕೆ ಅಲ್ಲ ಎಂಬುದನ್ನು ಉಡುಪಿಯ ಹಿರಿಯ ನಾಗರಿಕರು ಮತ್ತೊಮ್ಮೆ ಸಾಬೀತುಪಡಿಸಿದರು.


ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಉಡುಪಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಹಿರಿಯರ ಪಾಲಿಗೆ ಕೇವಲ ಸ್ಪರ್ಧೆಗಳಾಗಿರಲಿಲ್ಲ. ತಮ್ಮ ಬದುಕಿನ ಅನುಭವ, ಪ್ರತಿಭೆ ಹಾಗೂ ಉತ್ಸಾಹವನ್ನು ಮತ್ತೊಮ್ಮೆ ಅನಾವರಣಗೊಳಿಸುವ ಸುಂದರ ವೇದಿಕೆಯಾಗಿತ್ತು.


ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆಯಡಿ ನಡೆದ ಕಾರ್ಯಕ್ರಮದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಉತ್ಸಾಹದಿಂದ ಪಾಲ್ಗೊಂಡರು. 60–69 ಹಾಗೂ 70 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ನಡಿಗೆ ಹಾಗೂ ಬಕೆಟ್‌ಗೆ ಬಾಲ್ ಎಸೆಯುವ ಸ್ಪರ್ಧೆಗಳು ನಡೆದವು. ಪುರುಷರಿಗೆ ಕೇರಂ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯೂ ನಡೆಯಿತು.


ಕೇರಂ ಬೋರ್ಡ್ ಮುಂದೆ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದ ಹಿರಿಯರು, ಮೈದಾನದಲ್ಲಿ ಚುರುಕಾಗಿ ಹೆಜ್ಜೆ ಹಾಕುತ್ತಿದ್ದ ಸ್ಪರ್ಧಿಗಳು ಹಾಗೂ ಬಣ್ಣಬಣ್ಣದ ರಂಗೋಲಿಯಲ್ಲಿ ಕಲ್ಪನೆಗೆ ಜೀವ ತುಂಬುತ್ತಿದ್ದ ಹಿರಿಯ ಮಹಿಳೆಯರು ಕ್ರೀಡಾಂಗಣಕ್ಕೆ ಹಬ್ಬದ ವಾತಾವರಣ ತಂದರು. ಇಲ್ಲಿ ಗೆಲುವಿಗಿಂತ ಭಾಗವಹಿಸುವಿಕೆಯ ಸಂಭ್ರಮವೇ ದೊಡ್ಡದಾಗಿತ್ತು. ‘ನಾವಿನ್ನೂ ಏನಾದರೂ ಮಾಡಬಲ್ಲೆವು’ ಎಂಬ ಆತ್ಮವಿಶ್ವಾಸ ಹಿರಿಯರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿತು.


ಕ್ರೀಡಾ ಸ್ಪರ್ಧೆಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಹಿರಿಯರು ತಮ್ಮ ಪ್ರತಿಭೆ ಮೆರೆದರು. 60–69 ಹಾಗೂ 70 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಏಕಪಾತ್ರ ಅಭಿನಯ ಹಾಗೂ ಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವೇದಿಕೆಯ ಮೇಲೆ ನಿಂತಾಗ ವಯಸ್ಸಿನ ಛಾಯೆಗಿಂತ ದಶಕಗಳ ಜೀವನಾನುಭವದಿಂದ ಬಂದ ಆತ್ಮವಿಶ್ವಾಸವೇ ಎದ್ದು ಕಾಣಿಸಿತು. ಹಳೆಯ ಕನ್ನಡ ಗೀತೆಗಳ ಸುಮಧುರ ಗಾಯನ, ವಿಭಿನ್ನ ಪಾತ್ರಗಳ ಅಭಿನಯಕ್ಕೆ ಪ್ರೇಕ್ಷಕರಿಂದ ಮೊಳಗಿದ ಚಪ್ಪಾಳೆಗಳು ಹಿರಿಯರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದವು.


ಹಿರಿಯ ನಾಗರಿಕರ ದೈಹಿಕ ಹಾಗೂ ಮಾನಸಿಕ ಚೈತನ್ಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ವಿವಿಧ ಥೆರಪಿ ಚಟುವಟಿಕೆಗಳನ್ನೂ ಆಯೋಜಿಸಲಾಗಿತ್ತು. ಮಾರ್ಗದರ್ಶಿತ ಧ್ಯಾನ, ನೃತ್ಯ ಥೆರಪಿ, ಸಂಗೀತ ಥೆರಪಿ ಹಾಗೂ ಆರ್ಟ್ ಥೆರಪಿ ಮೂಲಕ ಹಿರಿಯರಿಗೆ ನೆಮ್ಮದಿ ಮತ್ತು ಸೃಜನಶೀಲತೆಯ ಅನುಭವ ನೀಡಲಾಯಿತು.

ಲಘು ವ್ಯಾಯಾಮದೊಂದಿಗೆ ನೃತ್ಯ ಥೆರಪಿ, ಭಕ್ತಿಗೀತೆಗಳು ಹಾಗೂ ಹಳೆಯ ಕನ್ನಡ ಸುಮಧುರ ಗೀತೆಗಳೊಂದಿಗೆ ಸಂಗೀತ ಥೆರಪಿ ನಡೆದರೆ, ಚಿತ್ರಕಲೆ ಸೇರಿದಂತೆ ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ಹಿರಿಯರು ತಮ್ಮೊಳಗಿನ ಕಲಾವಿದನನ್ನು ಮತ್ತೊಮ್ಮೆ ಹೊರತಂದರು.

ಕೆಲವರು ಕಣ್ಣುಮುಚ್ಚಿ ಧ್ಯಾನದಲ್ಲಿ ತೊಡಗಿದರು. ಮತ್ತೆ ಕೆಲವರು ಸಂಗೀತದ ತಾಳಕ್ಕೆ ಹೆಜ್ಜೆ ಹಾಕಿದರು. ಇನ್ನೂ ಕೆಲವರು ಬಣ್ಣಗಳೊಂದಿಗೆ ತಮ್ಮದೇ ಕಲಾಲೋಕವನ್ನು ಕಟ್ಟಿಕೊಂಡರು. ಹಿರಿಯರ ಬದುಕಿಗೆ ಆರೈಕೆಯಷ್ಟೇ ಅಲ್ಲ, ಸಂತೋಷ ಮತ್ತು ಸಕ್ರಿಯ ಬದುಕೂ ಅಗತ್ಯ ಎಂಬ ಸಂದೇಶವನ್ನು ಕಾರ್ಯಕ್ರಮ ಸಾರಿತು.

ಹಿರಿಯ ನಾಗರಿಕರನ್ನು ನಾವೆಲ್ಲಾ ಆರೈಕೆಗೆ ಅಗತ್ಯ ಇರುವವರು ಎನ್ನುವ ದೃಷ್ಟಿಕೋನದಿಂದಷ್ಟೇ ನೋಡುತ್ತೇವೆ.. ಆದರೆ ಹಿರಿಯರು ಕಳೆದುಹೋದ ಕಾಲದ ನೆನಪುಗಳಲ್ಲ; ಕುಟುಂಬದ ಬೇರುಗಳು, ಸಮಾಜದ ಅನುಭವದ ಭಂಡಾರ ಹಾಗೂ ಮುಂದಿನ ಪೀಳಿಗೆಗೆ ದಾರಿ ತೋರಿಸುವ ಜೀವಂತ ಜ್ಞಾನಕೋಶ ಎಂಬುವುದನ್ನು ಈ ಕಾರ್ಯಕ್ರಮಕ್ಕೆ ರೂಪಿಸಿಕೊಟ್ಟಿತು. 

ಅವರ ಕೈಯಲ್ಲಿ ಜೀವನದ ಅನುಭವವಿದೆ. ಅವರ ಮಾತಿನಲ್ಲಿ ಕಾಲದ ಕಥೆಯಿದೆ. ಅವರ ನಗುವಿನಲ್ಲಿ ಹಲವು ತಲೆಮಾರುಗಳ ನೆನಪುಗಳಿವೆ.ಅಂತಹ ಹಿರಿಯರನ್ನು ಕ್ರೀಡಾಂಗಣಕ್ಕೆ ಕರೆತಂದು, ಅವರ ಪ್ರತಿಭೆಗೆ ವೇದಿಕೆ ಕಲ್ಪಿಸಿ, ಅವರ ಮುಖದಲ್ಲಿ ನಗು ಮೂಡಿಸುವುದೇ ಇಂತಹ ಕಾರ್ಯಕ್ರಮಗಳ ನಿಜವಾದ ಉದ್ದೇಶ.

ಕಾರ್ಯಕ್ರಮ ಮುಕ್ತಾಯದ ಹಂತದಲ್ಲಿಯೂ ಹಿರಿಯರ ಉತ್ಸಾಹ ಕಡಿಮೆಯಾಗಿರಲಿಲ್ಲ. ಮೈದಾನದಲ್ಲಿ ಮೊಳಗಿದ ಚಪ್ಪಾಳೆ, ವೇದಿಕೆಯಲ್ಲಿ ಕೇಳಿಬಂದ ಹಾಡು, ರಂಗೋಲಿಯ ಬಣ್ಣಗಳು, ಕ್ರೀಡಾ ಸ್ಪರ್ಧೆಯ ಸಂಭ್ರಮ ಹಾಗೂ ಹಿರಿಯರ ಮುಖದಲ್ಲಿ ಮೂಡಿದ ನಗು—ಇವೆಲ್ಲವೂ ಒಂದೇ ಸಂದೇಶ ನೀಡಿದವು.

ವಯಸ್ಸು ಹೆಚ್ಚಾದಂತೆ ಬದುಕು ಮುಗಿಯುವುದಿಲ್ಲ; ಬದುಕನ್ನು ನೋಡುವ ದೃಷ್ಟಿ ಇನ್ನಷ್ಟು ಸುಂದರವಾಗುತ್ತದೆ. 60 ದಾಟಿದರೂ ಕನಸು ಕಾಣಬಹುದು. 70 ದಾಟಿದರೂ ಹಾಡಬಹುದು. ಮನಸ್ಸು ಬಯಸಿದರೆ ಮತ್ತೆ ಮಗುವಿನಂತೆ ನಗಬಹುದು. ವಯಸ್ಸು ತಮ್ಮ ನಡಿಗೆಯ ಹೆಜ್ಜೆಗಳನ್ನು ನಿಧಾನಗೊಳಿಸಬಹುದು; ಆದರೆ ಬದುಕಿನ ಮೇಲಿನ ಉತ್ಸಾಹವನ್ನು ಎಂದಿಗೂ ನಿಲ್ಲಿಸಲಾರದು ಎಂಬುವುದನ್ನು  ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರು ತೋರಿಸಿಕೊಟ್ಟರು. 

Ads on article

Advertise in articles 1

advertising articles 2

Advertise under the article