-->
 ಕಂಬಳದ ದಂತಕತೆ, 150ಕ್ಕೂ ಅಧಿಕ ಪದಕಗಳ ಸರದಾರ ನಂದಳಿಕೆ ‘ಪಾಂಡು’ ಇನ್ನಿಲ್ಲ

ಕಂಬಳದ ದಂತಕತೆ, 150ಕ್ಕೂ ಅಧಿಕ ಪದಕಗಳ ಸರದಾರ ನಂದಳಿಕೆ ‘ಪಾಂಡು’ ಇನ್ನಿಲ್ಲ


ಕಂಬಳ ಕ್ಷೇತ್ರದ ದಂತಕತೆ, ಅಪಾರ ಅಭಿಮಾನಿಗಳ ನೆಚ್ಚಿನ ಕಂಬಳ ಕೋಣ ಹಾಗೂ ತನ್ನ ಮಿಂಚಿನ ಓಟದ ಮೂಲಕ ಕಂಬಳ ಪ್ರಿಯರ ಮನಗೆದ್ದಿದ್ದ ನಂದಳಿಕೆಯ ‘ಪಾಂಡು’ ಅನಾರೋಗ್ಯದಿಂದ ಸೆ.28ರಂದು ಮುಂಜಾನೆ ನಿಧನ ಹೊಂದಿದೆ.


ನಂದಳಿಕೆ ಶ್ರೀಕಾಂತ್ ಭಟ್ ಅವರ ಮನೆಯ ಹಿರಿಯ ಸದಸ್ಯನಂತಿದ್ದ ಪಾಂಡು, ಹಲವು ವರ್ಷಗಳ ಕಾಲ ಕಂಬಳ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. ಸುಮಾರು 8 ವರ್ಷಗಳ ಕಾಲ ಚಾಂಪಿಯನ್ ಆಗಿ ಮೆರೆದಿದ್ದ ಪಾಂಡು, 150ಕ್ಕೂ ಅಧಿಕ ಪದಕಗಳನ್ನು ತನ್ನದಾಗಿಸಿಕೊಂಡಿತ್ತು.

ಕಂಬಳದ ಕಲದಲ್ಲಿ ಮಿಂಚಿನ ವೇಗದಲ್ಲಿ ಓಡುತ್ತಿದ್ದ ಪಾಂಡು, ತನ್ನ ಅದ್ಭುತ ಪ್ರದರ್ಶನದ ಮೂಲಕ ಮಾಲೀಕರಿಗೆ ಹಲವು ಗೌರವಗಳನ್ನು ತಂದುಕೊಟ್ಟಿತ್ತು. ಹಲವು ವರ್ಷಗಳ ಹಿಂದೆಯೇ ಕಂಬಳ ಸ್ಪರ್ಧೆಯಿಂದ ನಿವೃತ್ತಿ ಪಡೆದಿದ್ದರೂ, ಕಂಬಳಾಭಿಮಾನಿಗಳಲ್ಲಿ ಪಾಂಡುಗಿದ್ದ ಜನಪ್ರಿಯತೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ.

ತನ್ನ ವಿಶಿಷ್ಟ ಓಟ ಹಾಗೂ ಸಾಧನೆಯ ಮೂಲಕ ಕಂಬಳ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ಪಾಂಡು ಇದೀಗ ಇಹಲೋಕ ತ್ಯಜಿಸಿರುವುದು ಕಂಬಳಾಭಿಮಾನಿಗಳು ಹಾಗೂ ಮಾಲೀಕರಿಗೆ ತೀವ್ರ ನೋವುಂಟು ಮಾಡಿದೆ. ಕಂಬಳದ ಕಣದಲ್ಲಿ ತನ್ನ ವೇಗದ ಓಟದಿಂದ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದ ಪಾಂಡುನ ನಿಧನಕ್ಕೆ ಕಂಬಳ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Ads on article

Advertise in articles 1

advertising articles 2

Advertise under the article