ಜನರು ಬಿಜೆಪಿಗರ ಮನೆಗಳಿಗೆ ನುಗ್ಗಿ ಹೊಡೆಯುವ ದಿನಗಳು ದೂರವಿಲ್ಲ: ಕಿಶನ್ ಹೆಗ್ಡೆ ಆಕ್ರೋಶ
Monday, September 28, 2026
ಮುಖ್ಯ ಚುನಾವಣಾ ಆಯುಕ್ತರು ಅಕ್ರಮ ಎಸಗಿದರೂ ಅವರನ್ನು ಬಂಧಿಸಲು ಸಾಧ್ಯವಾಗದಂತೆ ಕಾನೂನು ಬದಲಾವಣೆ ಮಾಡಿರುವುದು ಕೇಂದ್ರದ ಬಿಜೆಪಿ ಸರಕಾರದ ಲಜ್ಜೇಗೇಡಿ ವರ್ತನೆ. ಇದೇನಾ ಬಿಜೆಪಿಯವರ ಅಚ್ಚೇ ದಿನ್!? ಇನ್ನು ಮುಂದೆಯೂ ಇಂತಹ ಅಕ್ರಮಗಳನ್ನು ನಡೆಸುತ್ತಿದ್ದರೆ ಜನ ಬಿಜೆಪಿಗರ ಮನೆಗೆ ನುಗ್ಗಿ ಹೊಡೆಯುವ ದಿನಗಳು ದೂರವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಕುಮಾರ್ ಹೆಗ್ಡೆ ಹೇಳಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿ ಕಛೇರಿ ಎದುರು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹುಂಡಿಕಳ್ಳರಿಂದ ಭಗವತ್ ಗೀತೆ ಪಾಠ ಕಲಿಯುವ ಅಗತ್ಯ ಈ ದೇಶದ ಜನರಿಗಿಲ್ಲ ಎಂದೂ ಅವರು ಹೇಳಿದರು.
ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಮೋದಿ ನೇತೃತ್ವದ ಬಿಜೆಪಿ ಸರಕಾರದ ದುರಾಡಳಿತಕ್ಕೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು ಬಲಿಯಾಗುತ್ತಿರುವುದು ದುರದೃಷ್ಟಕರ ಎಂದರು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್ ಮಾತನಾಡಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯ ಬಳಿಕ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದ ಅವರು ತಪ್ಪಿದಲ್ಲಿ ಚುನಾವಣಾ ಆಯೋಗದ ಅಗತ್ಯ ದಾಖಲೆಗಳು ಸುಟ್ಟು ಹೋಗುವ ಸಾಧ್ಯತೆಗಳಿವೆ ಎಂದರು.
ವೆರೊನಿಕಾ ಕರ್ನೇಲಿಯೊ ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ಮತಗಳನ್ನು ಪಡೆಯಲು ಆಗದ ಬಿಜೆಪಿ ಜಾತಿ-ಧರ್ಮದ ಹೆಸರಿನಲ್ಲಿ, ಓಟ್ ಚೋರಿಯ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಪ್ರತಿಭಾಟನಾ ಸಭೆಯ ಕೊನೆಯಲ್ಲಿ ಕಾರ್ಯಕರ್ತರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಗುಪ್ತಾ ಪ್ರತಿಕೃತಿಯ ಜೊತೆಗೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಪ್ರತಿಕೃತಿಗಳಿಗೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.