-->
 ಅ.4: ತುಳು ಭಾಷಾ ಮಾನ್ಯತೆ ಸಂಭ್ರಮಕ್ಕೆ ‘ತುಳುವೆರೆ ದಿಬ್ಬಣ’, ಎಸ್.ಯು ಪಣಿಯಾಡಿ ನೆನಪಿನ ಕಾದಂಬರಿ ಪ್ರಶಸ್ತಿ ಪ್ರದಾನ

ಅ.4: ತುಳು ಭಾಷಾ ಮಾನ್ಯತೆ ಸಂಭ್ರಮಕ್ಕೆ ‘ತುಳುವೆರೆ ದಿಬ್ಬಣ’, ಎಸ್.ಯು ಪಣಿಯಾಡಿ ನೆನಪಿನ ಕಾದಂಬರಿ ಪ್ರಶಸ್ತಿ ಪ್ರದಾನ


ತುಳು ಭಾಷೆಗೆ ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ತುಳುಕೂಟ ಉಡುಪಿ ವತಿಯಿಂದ ಅ.4ರಂದು ಉಡುಪಿಯಲ್ಲಿ ‘ತುಳುವೆರೆ ದಿಬ್ಬಣ’ ಹಾಗೂ ಗೌಜಿ-ಮಿನದನ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೇ ಅದೇ ದಿನ ತುಳುಕೂಟ ಉಡುಪಿ  ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿಶ್ವಪ್ರಭಾ ಪ್ರಾಯೋಜಿತ 31ನೇ ವರ್ಷದ ತುಳು ಚಳವಳಿಯ ನೇತಾರ ದಿ. ಎಸ್.ಯು. ಪಣಿಯಾಡಿ ನೆನಪಿನ ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭವೂ ಸಂಜೆ 4 ಗಂಟೆಗೆ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ.

ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತುಳು ಕೂಟದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಅಂದು ಸಂಜೆ 3 ಗಂಟೆಗೆ ಕುಂಜಿಬೆಟ್ಟು ರಿಕ್ಷಾ ನಿಲ್ದಾಣದಿಂದ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದವರೆಗೆ ತುಳುಕೂಟದ ಸದಸ್ಯರು ಹಾಗೂ ವಿವಿಧ ತುಳು ಸಂಘಟನೆಗಳ ಸಹಯೋಗದಲ್ಲಿ ‘ತುಳುವೆರೆ ದಿಬ್ಬಣ’ ನಡೆಯಲಿದೆ. ಬಳಿಕ ಸಂಜೆ 4 ಗಂಟೆಗೆ ಐವೈಸಿ ಸಭಾಂಗಣದಲ್ಲಿ ತುಳು ಭಾಷಾ ಮಾನ್ಯತೆ ಸಂಭ್ರಮ ಹಾಗೂ ವಿಶ್ವಪ್ರಭಾ ಪ್ರಾಯೋಜಿತ ಎಸ್.ಯು. ಪಣಿಯಾಡಿ ನೆನಪಿನ ತುಳು ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ತುಳು ಭಾಷೆಗೆ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ತುಳುಕೂಟವು ಈ ಕಾರ್ಯಕ್ರಮದ ಮೂಲಕ ತುಳುವರ ಸಂಭ್ರಮವನ್ನು ವ್ಯಕ್ತಪಡಿಸಲಿದೆ. ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಿಸುವ ಪ್ರಕ್ರಿಯೆಯಲ್ಲಿ ಹೋರಾಟ ನಡೆಸಿದ ಅಖಿಲ ಭಾರತ ತುಳು ಒಕ್ಕೂಟ, ಮಂಗಳೂರು ಇದರ ಅಧ್ಯಕ್ಷ ಎ.ಸಿ. ಭಂಡಾರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟ ಉಡುಪಿ (ರಿ.) ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ವಹಿಸಲಿದ್ದಾರೆ. ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್ ಹಾಗೂ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತುಳು ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.

ತುಳುಕೂಟ ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿಶ್ವಪ್ರಭಾ ಪ್ರಾಯೋಜಿತ 31ನೇ ವರ್ಷದ ತುಳು ಚಳವಳಿಯ ನೇತಾರ ದಿ. ಎಸ್.ಯು. ಪಣಿಯಾಡಿ ನೆನಪಿನ ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭವು ಅ.4ರಂದು ಸಂಜೆ 4 ಗಂಟೆಗೆ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ. 

ತುಳುಕೂಟದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಲಿದ್ದು, ಅಖಿಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷ ಬರೋಡಾ ಶಶಿಧರ ಶೆಟ್ಟಿ, ತುಳು ಸಂಘ ಬರೋಡಾದ ಗೌರವಾಧ್ಯಕ್ಷ ದಯಾನಂದ ಬೋಂಟ್ರ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ಸಮಾಜ ಸೇವಕ ಹಾಗೂ ಪಣಿಯಾಡಿ ಕಾದಂಬರಿ ಪ್ರಶಸ್ತಿಯ ಪ್ರಾಯೋಜಕ ಉಡುಪಿ ವಿಶ್ವನಾಥ ಶೆಣೈ ಹಾಗೂ ಯುವ ಉದ್ಯಮಿ, ಉಡುಪಿ ಹೃದಯಂ ಫೌಂಡೇಶನ್‌ನ ಪ್ರವರ್ತಕ ಸುಭಾಷ್ ಸಾಲ್ಯಾನ್ ನೆಲ್ಲಿಕಟ್ಟಿ ಭಾಗವಹಿಸಲಿದ್ದಾರೆ.

2025ನೇ ಸಾಲಿನ ಪಣಿಯಾಡಿ ಕಾದಂಬರಿ ಪ್ರಶಸ್ತಿಗೆ ಪುತ್ತೂರಿನ ಉಪತಹಶೀಲ್ದಾರ್ ಸುಲೋಚನಾ ಪಿ.ಕೆ. ಅವರ ‘ದಧೂಟಿ ಬನ’ ಕಾದಂಬರಿ ಆಯ್ಕೆಯಾಗಿದ್ದು, ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಪ್ರಶಸ್ತಿಯು 10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಕೃತಿಯ ಪರಿಚಯವನ್ನು ಸಾಹಿತಿ ವಾಸಂತಿ ಅಂಬಲಪಾಡಿ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಭುವನ ಪ್ರಸಾದ್ ಹೆಗ್ಡೆ, ಡಾ. ವಿ.ಕೆ. ಯಾದವ್, ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಕೋಶಾಧಿಕಾರಿ ಎಂ.ಜಿ. ಚೈತನ್ಯ, ಪಣಿಯಾಡಿ ಪ್ರಶಸ್ತಿ ಸಂಚಾಲಕ ಪ್ರಕಾಶ್ ಸುವರ್ಣ ಕಟಪಾಡಿ, ತುಳುವೆರೆ ದಿಬ್ಬಣ ಸಂಚಾಲಕ ದಿವಾಕರ್ ಸನಿಲ್, ಮಾಧ್ಯಮ ಸಂಚಾಲಕಿ ಯಶೋಧ ಕೇಶವ್ ಹಾಗೂ ನಾಟಕ ಪರ್ಬ ಸಂಚಾಲಕ ಬಿ. ಪ್ರಭಾಕರ್ ಭಂಡಾರಿ, ಸದಸ್ಯೆ ಭಾರತಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article