ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಜಾಗೃತಿ ಅಗತ್ಯ: ಗುಜ್ಜಾಡಿ ರಾಮದಾಸ ನಾಯಕ್
ಸಾಮಾಜಿಕ ಜಾಲತಾಣಗಳಿಂದ ಒಳಿತಿನ ಜತೆಗೆ ಕೆಡುಕೂ ಹೆಚ್ಚಾಗುತ್ತಿದ್ದು, ಸಮುದಾಯಗಳ ನಡುವಿನ ಬಾಂಧವ್ಯ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಲ್ಲರೂ ಜಾಗೃತರಾಗಿರಬೇಕು ಎಂದು ಸ್ವರ್ಣ ಜುವೆಲರ್ಸ್ ನಿರ್ದೇಶಕ ಗುಜ್ಜಾಡಿ ರಾಮದಾಸ ನಾಯಕ್ ಹೇಳಿದರು.
ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದ ಹೊರಾಂಗಣದಲ್ಲಿರುವ ಗುಜ್ಜಾಡಿ ನರಸಿಂಹ ನಾಯಕ್ ವೇದಿಕೆಯಲ್ಲಿ ಉಡುಪಿ ಗಣೇಶೋತ್ಸವ ಸಮಿತಿಯ 60ನೇ ವರ್ಷದ ಹಾಗೂ ವಜ್ರ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಜನಿಸಿರುವ ನಾವೆಲ್ಲರೂ ಅದೃಷ್ಟವಂತರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಿಂದೂ ಧರ್ಮದ ಪುನರುತ್ಥಾನ ನಡೆಯುತ್ತಿದ್ದು, ಭಾರತ ವಿಶ್ವಗುರುವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಿತಿಯ ಗೌರವ ಸಲಹೆಗಾರ ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, 60 ವರ್ಷಗಳ ಹಿಂದೆ ಹಿರಿಯರು ಆರಂಭಿಸಿದ ಗಣೇಶೋತ್ಸವದ ಭಕ್ತಿಭಾವ ಇಂದಿಗೂ ಮುಂದುವರಿದಿರುವುದು ವಿಶೇಷ. ಗಣೇಶೋತ್ಸವವು ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ಮತ್ಸ್ಯೋದ್ಯಮಿ ಸಾಧು ಸಾಲಿಯಾನ್ ಮಲ್ಪೆ, ಉದ್ಯಮಿ ಭಾಸ್ಕರ್ ಶೇರಿಗಾರ್, ವಜ್ರ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಮಂಜುನಾಥ ಹೆಬ್ಬಾರ್ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಪ. ವಸಂತ್ ಭಟ್ ಸ್ವಾಗತಿಸಿದರು. ವಜ್ರ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಹಾಗೂ ಸರಿತಾ ಕಾರ್ಯಕ್ರಮ ನಿರ್ವಹಿಸಿದರು.
ವಜ್ರ ಮಹೋತ್ಸವದ ಅಂಗವಾಗಿ ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಕೋಡಿಕಲ್‌ನ ಶ್ರೀರಾಮ ಮುಖ್ಯಪ್ರಾಣ ಕುಣಿತ ಭಜನಾ ತಂಡ ಪ್ರಥಮ ಸ್ಥಾನ ಗಳಿಸಿತು. ಹೊಸಬೆಟ್ಟು ಸುರತ್ಕಲ್‌ನ ಶ್ರೀ ಬಾಲವಿಕಾಸ ಭಜನಾ ಮಂಡಳಿ ದ್ವಿತೀಯ ಹಾಗೂ ಕಾರ್ಕಳದ ನೀರೇಬೈಲೂರಿನ ಶ್ರೀದೇವಿ ಭಜನಾ ಮಂಡಳಿ ತೃತೀಯ ಸ್ಥಾನ ಪಡೆದುಕೊಂಡವು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಖ್ಯಾತಿ ಭಟ್ ವಂದೇ ಮಾತರಂ ಗೀತೆ ಹಾಡಿದರು. ಕಾರ್ಯಕ್ರಮಕ್ಕೂ ಮುನ್ನ ಭರತಾಂಜಲಿ ಕಡಿಯಾಳಿ ತಂಡದಿಂದ ಲಘು ಸಂಗೀತ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ತೆಂಕು ಮತ್ತು ಬಡಗು ತಿಟ್ಟಿನ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು. ರಾತ್ರಿ 8.30ಕ್ಕೆ ಗಣಪನ ಸನ್ನಿಧಿಯಲ್ಲಿ ರಂಗಪೂಜೆ ನೆರವೇರಿತು.
