ಮಂಗಳೂರು ಧಕ್ಕೆಗೆ ಸಿಎಂ ಡಿ. ಕೆ ಶಿವಕುಮಾರ್ ಭೇಟಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳಗ್ಗೆ 6 ಗಂಟೆಗೆ ಸಚಿವ ಯು.ಟಿ. ಖಾದರ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಂಗಳೂರಿನ ಮೀನುಗಾರಿಕಾ ಬಂದರು (ಧಕ್ಕೆ) ಮತ್ತು ಅಳಿವೆಬಾಗಿಲಿಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು.
ಸಿಎಂ ಅವರು ಬೋಟ್‌ನಲ್ಲಿ ಸಮುದ್ರ ಹಾಗೂ ಅಳಿವೆಬಾಗಿಲಿಗೆ ತೆರಳಿ, ಇತ್ತೀಚೆಗೆ ಹೂಳು ತುಂಬಿಕೊಂಡು ಬೋಟ್ ಮುಳುಗಿದ್ದ ಸ್ಥಳವನ್ನು ವೀಕ್ಷಿಸಿದರು. ಬಳಿಕ ಅಧಿಕಾರಿಗಳು ಸಿದ್ಧಪಡಿಸಿದ್ದ ಬ್ಲೂಪ್ರಿಂಟ್ ಪರಿಶೀಲಿಸಿ ಧಕ್ಕೆ ವಿಸ್ತರಣೆ ಹಾಗೂ ಜೆಟ್ಟಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು.
ಮೀನು ಮಾರುಕಟ್ಟೆಗೆ ಭೇಟಿ ನೀಡಿದ ವೇಳೆ ಸ್ಥಳೀಯರು ಹಿಡಿದಿದ್ದ ಬೃಹತ್ ಗಾತ್ರದ ಅಂಜಲ್ (ಸುರ್ಮೆ) ಮೀನುಗಳನ್ನು ಕೈಯಲ್ಲಿ ಹಿಡಿದು ವೀಕ್ಷಿಸಿದ ಅವರು, ಮೀನು ವ್ಯಾಪಾರಿಗಳ ಕ್ಷೇಮ ವಿಚಾರಿಸಿದರು.
ತಮ್ಮ ಭೇಟಿಯ ಹಿನ್ನೆಲೆಯಲ್ಲಿ ಧಕ್ಕೆಯಲ್ಲಿನ ಸಾರ್ವಜನಿಕ ಮೀನು ಮಾರಾಟ ಹಾಗೂ ದೈನಂದಿನ ವಹಿವಾಟನ್ನು ಪೊಲೀಸರು ಮತ್ತು ಅಧಿಕಾರಿಗಳು ಸ್ಥಗಿತಗೊಳಿಸಿದ್ದನ್ನು ಕಂಡು ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ನನಗೆ ಯಾವುದೇ ಸೆಕ್ಯುರಿಟಿ ಅಗತ್ಯವಿಲ್ಲ. ಇಲ್ಲಿನ ನೈಜ ವಹಿವಾಟು ಹಾಗೂ ಜನರ ತೊಂದರೆಗಳನ್ನು ನೇರವಾಗಿ ನೋಡಲು ಬಂದಿದ್ದೆ. ಆದರೆ ಅಧಿಕಾರಿಗಳು ಇಡೀ ಧಕ್ಕೆಯನ್ನೇ ಬಂದ್ ಮಾಡಿಸಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಅವರಿಂದ ವರದಿ ಕೇಳಿರುವುದಾಗಿ ತಿಳಿಸಿದ ಅವರು, ವ್ಯಾಪಾರ ಬಂದ್ ಮಾಡಿಸಿದ ಅಧಿಕಾರಿಗಳು ಯಾರೇ ಆಗಿದ್ದರೂ ಅವರನ್ನು ಇಂದೇ ಅಮಾನತು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅಳಿವೆಬಾಗಿಲಿನಲ್ಲಿ ನಿರಂತರವಾಗಿ ಹೂಳು ತುಂಬಿಕೊಳ್ಳುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವೇ ಡ್ರೆಜ್ಜರ್ ಯಂತ್ರವನ್ನು ಲೀಸ್‌ಗೆ ಪಡೆಯುವುದು ಅಥವಾ ಸ್ವಂತವಾಗಿ ಖರೀದಿಸುವ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು. ತೆರವುಗೊಳಿಸಿದ ಹೂಳನ್ನು ಜಾಗ ವಿಸ್ತರಣೆಗೆ ಬಳಸುವ ಕುರಿತು ಕೇಂದ್ರದ ತಾಂತ್ರಿಕ ಸಮಿತಿಯ ಸಲಹೆ ಪಡೆಯಲಾಗುವುದು ಎಂದರು.
ಮೀನುಗಾರರ ಅನುಕೂಲಕ್ಕಾಗಿ ಮಹಿಳೆಯರಿಗೆ ಸುಸಜ್ಜಿತ ಶೌಚಾಲಯ, ಪ್ರಾಥಮಿಕ ಆರೋಗ್ಯ ತಪಾಸಣಾ ಕೇಂದ್ರ ಹಾಗೂ ಸಮುದ್ರದಲ್ಲಿ ತುರ್ತು ಸೇವೆ ಒದಗಿಸಲು ಬೋಟ್ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
