-->
 ಮಣಿಪಾಲ: ವಿಂಗ್ಸ್ ಆಫ್ ಹೋಪ್’: ಕ್ಯಾನ್ಸರ್‌ನಿಂದ ಗುಣಮುಖರಾದ ಮಕ್ಕಳಿಗೆ ಕಸ್ತೂರ್ಬಾ ಆಸ್ಪತ್ರೆ ಗೌರವ

ಮಣಿಪಾಲ: ವಿಂಗ್ಸ್ ಆಫ್ ಹೋಪ್’: ಕ್ಯಾನ್ಸರ್‌ನಿಂದ ಗುಣಮುಖರಾದ ಮಕ್ಕಳಿಗೆ ಕಸ್ತೂರ್ಬಾ ಆಸ್ಪತ್ರೆ ಗೌರವ


ಬಾಲ್ಯ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮಣಿಪಾಲದ ಮಕ್ಕಳ ಕ್ಯಾನ್ಸರ್ ವಿಭಾಗದ ವತಿಯಿಂದ ‘ವಿಂಗ್ಸ್ ಆಫ್ ಹೋಪ್’ ವಿಶೇಷ ಕಾರ್ಯಕ್ರಮವು ಮಣಿಪಾಲದ ಹಾವಂಜೆಯಲ್ಲಿರುವ ಮಣಿಪಾಲ ಹಾಸ್ಪೈಸ್ ಆ್ಯಂಡ್ ರೆಸ್ಪೈಟ್ ಸೆಂಟರ್ (MHRC) ಸಭಾಂಗಣದಲ್ಲಿ ನಡೆಯಿತು.


‘ಭರವಸೆ, ಶಕ್ತಿ ಮತ್ತು ನಗು’ ಎಂಬ ಸಂದೇಶದೊಂದಿಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬಾಲ್ಯ ಕ್ಯಾನ್ಸರ್‌ನಿಂದ ಗುಣಮುಖರಾದ ಸುಮಾರು 65 ಮಕ್ಕಳು ಹಾಗೂ ಅವರ ಪೋಷಕರು ಭಾಗವಹಿಸಿದರು. ಕ್ಯಾನ್ಸರ್ ಜಾಗೃತಿಯ ಸಂಕೇತವಾದ ಚಿನ್ನದ ರಿಬ್ಬನ್‌ನೊಂದಿಗೆ ಪುಟ್ಟ ಧೀರ ಮಕ್ಕಳನ್ನು ಗೌರವಿಸಿ, ಅವರ ಹೋರಾಟ ಮತ್ತು ಗೆಲುವನ್ನು ಸಂಭ್ರಮಿಸಲಾಯಿತು.

ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ನಟಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತೆ ರೂಪಶ್ರೀ ವರ್ಕಾಡಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳ ಚಿಕಿತ್ಸೆ ಹಾಗೂ ಆರೈಕೆಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.

ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಪುಟ್ಟ ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಯಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ. ಪೋಷಕರು ಮತ್ತು ಮಕ್ಕಳು ವೈದ್ಯರ ಮೇಲೆ ವಿಶ್ವಾಸವಿಟ್ಟು ಅವರೊಂದಿಗೆ ಕೈಜೋಡಿಸಬೇಕು. ಗುಣಮುಖರಾದ ಕುಟುಂಬಗಳು ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಭೇಟಿ ಮಾಡಿ ತಮ್ಮ ಅನುಭವ ಹಂಚಿಕೊಳ್ಳಬೇಕು. ಅದೇ ಹಾದಿಯಲ್ಲಿ ನಡೆದು ಗೆದ್ದವರನ್ನು ಭೇಟಿಯಾಗುವುದಕ್ಕಿಂತ ಕ್ಯಾನ್ಸರ್ ವಿರುದ್ಧ ಹೋರಾಡುವ ಮಗುವಿಗೆ ದೊಡ್ಡ ಶಕ್ತಿ ಮತ್ತೊಂದಿಲ್ಲ ಎಂದು ರೂಪಶ್ರೀ ವರ್ಕಾಡಿ ಹೇಳಿದರು.

ಗುಣಮುಖರಾದ ಮಕ್ಕಳ ಪರವಾಗಿ ಮಾತನಾಡಿದ ಐಶ್ವರ್ಯ ಹಾಗೂ ಗುಣಮುಖ ಮಗುವಿನ ತಾಯಿ ಶ್ವೇತಾ ಅವರು, ಮಕ್ಕಳ ಕ್ಯಾನ್ಸರ್ ವಿಭಾಗ ಮತ್ತು ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು, ದಾದಿಯರು ಹಾಗೂ ಆರೈಕೆ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ನಮ್ಮ ಜೀವನದ ಅತ್ಯಂತ ಕಷ್ಟದ ದಿನಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕುಟುಂಬದವರಂತೆ ನಮ್ಮೊಂದಿಗೆ ನಿಂತರು. ಅವರ ಆರೈಕೆ ಮತ್ತು ಕರುಣೆಯಿಂದಾಗಿ ಇಂದು ನಮ್ಮ ಮಕ್ಕಳು ನಗುತ್ತಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆ, ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಮಾತನಾಡಿ, ಪ್ರತಿಯೊಂದು ಗುಣಮುಖ ಮಗುವಿನ ಹಿಂದೆ ಮಗುವಿನ ಧೈರ್ಯ, ಕುಟುಂಬದ ಸಮರ್ಪಣೆ ಹಾಗೂ ವೈದ್ಯಕೀಯ ತಂಡದ ಬದ್ಧತೆಯಿದೆ ಎಂದರು. “‘ವಿಂಗ್ಸ್ ಆಫ್ ಹೋಪ್’ ಕಾರ್ಯಕ್ರಮವು ಈ ಪುಟ್ಟ ವೀರರನ್ನು ಸಂಭ್ರಮಿಸುವುದರ ಜೊತೆಗೆ, ಪ್ರತಿ ಕುಟುಂಬಕ್ಕೂ ‘ನೀವು ಈ ಪಯಣದಲ್ಲಿ ಒಂಟಿಯಲ್ಲ’ ಎಂಬ ಸಂದೇಶ ನೀಡುವ ಪ್ರಯತ್ನವಾಗಿದೆ. ಮಾಹೆ ಹಾಗೂ ನಮ್ಮ ಬೋಧನಾ ಆಸ್ಪತ್ರೆಗಳು ಮಕ್ಕಳ ಕ್ಯಾನ್ಸರ್ ಆರೈಕೆಗೆ ಕರುಣಾಪೂರ್ಣ ಹಾಗೂ ವಿಶ್ವದರ್ಜೆಯ ಸೇವೆ ನೀಡಲು ಸದಾ ಬದ್ಧವಾಗಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದ ಮಕ್ಕಳಿಗಾಗಿ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. 12 ವರ್ಷದೊಳಗಿನ ಮಕ್ಕಳು ಕಥೆ ಹೇಳುವ ಗೋಷ್ಠಿ ಹಾಗೂ ‘ಪೀಸ್ ಕ್ರೇನ್’ ಒರಿಗಾಮಿ ಚಟುವಟಿಕೆಯಲ್ಲಿ ಪಾಲ್ಗೊಂಡರು. 12 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಮಕ್ಕಳು ‘ಕ್ಯಾನ್ಸರ್ ನಂತರದ ಬದುಕು’ ವಿಷಯದ ಕುರಿತು ಸೃಜನಶೀಲ ಬರವಣಿಗೆ ಮತ್ತು ವಿಚಾರಮಂಥನದಲ್ಲಿ ಭಾಗವಹಿಸಿದರು. ‘ನಾಳೆ ರಾಜ ಕೋಳಿ ಮಜಾ’ ಚಿತ್ರದ ವಿಶೇಷ ಪ್ರದರ್ಶನವೂ ನಡೆಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ‘ಸ್ಮೃತಿ ಗೋಡೆ’ಯನ್ನು ಅನಾವರಣಗೊಳಿಸಲಾಯಿತು. ಗುಣಮುಖರಾದ ಮಕ್ಕಳು ತಮ್ಮ ಪೋಷಕರೊಂದಿಗೆ ಇರುವ ಚಿತ್ರಗಳು ಹಾಗೂ ಅವರ ಕಥೆಗಳನ್ನು ಒಳಗೊಂಡ ಈ ಗೋಡೆಯು ಮಕ್ಕಳ ಸಹನಶಕ್ತಿ ಮತ್ತು ಪ್ರತಿಕೂಲತೆಯ ವಿರುದ್ಧದ ಭರವಸೆಯ ಗೆಲುವಿಗೆ ಸಾಕ್ಷಿಯಾಯಿತು.

ಈ ಸಂದರ್ಭದಲ್ಲಿ ಮಣಿಪಾಲ ಹಾಸ್ಪೈಸ್ ಆ್ಯಂಡ್ ರೆಸ್ಪೈಟ್ ಸೆಂಟರ್‌ನ ನಿರ್ದೇಶಕಿ ಹಾಗೂ ಪ್ಯಾಲಿಯೇಟಿವ್ ಮೆಡಿಸಿನ್ ಸಲಹೆಗಾರರಾದ ಡಾ. ಸೀಮಾ ರಾಜೇಶ್ ರಾವ್, ಮಕ್ಕಳ ಕ್ಯಾನ್ಸರ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ., ACT ಕ್ಲಿನಿಕ್‌ನ ಇನ್‌ಚಾರ್ಜ್ ಹಾಗೂ ಸಹ ಪ್ರಾಧ್ಯಾಪಕಿ ಡಾ. ಎಮಿನ್ ಎ. ರಹಿಮಾನ್ ಸೇರಿದಂತೆ ಬೋಧಕ ಸಿಬ್ಬಂದಿ, ದಾದಿಯರು, ಆರೈಕೆದಾರರು ಉಪಸ್ಥಿತರಿದ್ದರು.

ಡಾ. ಅರ್ಚನಾ ಸ್ವಾಗತಿಸಿದರು. ಡಾ. ಸ್ವಾತಿ ವಂದನಾರ್ಪಣೆ ಸಲ್ಲಿಸಿದರು. ಡಾ. ಚೈತ್ರ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.


Ads on article

Advertise in articles 1

advertising articles 2

Advertise under the article