ಧರ್ಮಸ್ಥಳ: ಯಾತ್ರಿಕರು ಪ್ರಯಾಣಿಸುತ್ತಿದ್ದ ಕಾರು ಪಲ್ಟಿ- ಮೂವರಿಗೆ ಗಾಯ
Tuesday, September 15, 2026
ಧರ್ಮಸ್ಥಳದಿಂದ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಕಾರೊಂದು ಪಲ್ಟಿಯಾಗಿ ಕಾರಿನಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ನೇತ್ರಾವತಿಯ ಸರ್ವಿಸ್ ಸ್ಟೇಷನ್ ತಿರುವಿನಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ನಾಲ್ವರು ಕುಟುಂಬ ಸದಸ್ಯರು ಟೊಯೋಟಾ ಈಟಿಯಾಸ್ ಕಾರಿನಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿ ಬಳಿಕ ಉಜಿರೆ ಕಡೆ ಪ್ರಯಾಣ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಸೆ.14 ರಂದು ರಾತ್ರಿ 9:30 ಗಂಟೆಗೆ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದ ಬಳಿಯ ಸರ್ವಿಸ್ ಸ್ಟೇಷನ್ ಪಕ್ಕದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಈ ವೇಳೆ ಕಾರು ಚಾಲಕ ಶಶಿಕುಮಾರ್ ಸಹಿತ ಮೂರು ಜನರಿಗೆ ಕಾಲು ಮತ್ತು ಕೈಗೆ ಗಾಯವಾಗಿದೆ. ತಕ್ಷಣ ಮೂವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.