ಶಿಕ್ಷಕರಿಗೆ ‘Tr’ ಉಪನಾಮ ಬಳಕೆಗೆ ಅವಕಾಶ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ
ಶಿಕ್ಷಕರ ಸಮಾಜಮುಖಿ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕದ ಶಿಕ್ಷಕರು ತಮ್ಮ ಹೆಸರಿನ ಮುಂದೆ ‘Tr’ ಎಂಬ ಉಪನಾಮವನ್ನು ಬಳಸಿಕೊಳ್ಳಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಘೋಷಿಸಿದ್ದಾರೆ.
ಶಿಕ್ಷಕರ ದಿನಾಚರಣೆಯ ಅಂಗವಾಗಿ ಈ ಘೋಷಣೆ ಮಾಡಲಾಗಿದೆ. ವೈದ್ಯರಿಗೆ ‘Dr’, ಇಂಜಿನಿಯರ್‌ಗಳಿಗೆ ‘Er’ ಹಾಗೂ ಉಪನ್ಯಾಸಕರುಗಳಿಗೆ ‘Prof’ ಎಂಬ ವೃತ್ತಿಪರ ಗೌರವ ಸೂಚಕ ಉಪನಾಮಗಳಿರುವಂತೆ, ಶಿಕ್ಷಕರಿಗೂ ‘Tr’ ಎಂಬ ಗೌರವ ಸೂಚಕವನ್ನು ಬಳಸಲು ಅವಕಾಶ ನೀಡಲಾಗಿದೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಶಿವಕುಮಾರ್, “ಒಬ್ಬ ಶಿಕ್ಷಕನು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರತಿಯೊಬ್ಬ ವ್ಯಕ್ತಿಯನ್ನೂ ರೂಪಿಸುತ್ತಾನೆ. ಭಾರತದಲ್ಲಿ ಒಂದು ಕೋಟಿಗೂ ಹೆಚ್ಚು ಶಿಕ್ಷಕರು ಹಾಗೂ ಕರ್ನಾಟಕದಲ್ಲಿ ಸುಮಾರು 4.5 ಲಕ್ಷ ಶಿಕ್ಷಕರು ಪ್ರತಿದಿನವೂ ಮಕ್ಕಳ ಚಿಂತನೆ, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರೂಪಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ವೈದ್ಯರು, ಇಂಜಿನಿಯರ್‌ಗಳು, ರೈತರು, ವಕೀಲರು, ಅಧಿಕಾರಿಗಳು, ಉದ್ಯಮಿಗಳು ಹಾಗೂ ನಾಯಕರು ಸೇರಿದಂತೆ ಪ್ರತಿಯೊಬ್ಬರ ಹಿಂದೆ ಅವರ ಸಾಮರ್ಥ್ಯವನ್ನು ಗುರುತಿಸಿ, ಸಾಧ್ಯತೆಗಳ ಬಗ್ಗೆ ಮಾರ್ಗದರ್ಶನ ನೀಡಿದ ಒಬ್ಬ ಶಿಕ್ಷಕರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
“ಶಿಕ್ಷಕರ ಅಮೂಲ್ಯ ಕೊಡುಗೆಯನ್ನು ಗೌರವಿಸುವ ಸಲುವಾಗಿ ಕರ್ನಾಟಕ ಸರ್ಕಾರ ಇಂದಿನಿಂದ ಶಿಕ್ಷಕರು ತಮ್ಮ ಹೆಸರಿನ ಮುಂದೆ ಹೆಮ್ಮೆಯಿಂದ ‘Tr’ ಎಂಬ ಉಪನಾಮವನ್ನು ಬಳಸಿಕೊಳ್ಳಲು ನಿರ್ಧರಿಸಿದೆ,” ಎಂದು ಶಿವಕುಮಾರ್ ಹೇಳಿದ್ದಾರೆ.
ಎರಡು ಅಕ್ಷರಗಳ ‘Tr’ ಕೇವಲ ಒಂದು ಬಿರುದು ಅಲ್ಲ. ಅದು ಇತರರ ಭವಿಷ್ಯವನ್ನು ರೂಪಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿಕ್ಷಕರಿಗೆ ಸಮಾಜ ನೀಡುವ ಗೌರವದ ಸಂಕೇತವಾಗಿದೆ ಎಂದು ಅವರು ವಿವರಿಸಿದ್ದಾರೆ.
“ತನ್ನ ಶಿಕ್ಷಕರನ್ನು ಗೌರವಿಸುವ ಸಮಾಜ ತನ್ನದೇ ಭವಿಷ್ಯವನ್ನು ಗೌರವಿಸುತ್ತದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ತಪ್ಪುಗಳನ್ನು ತಿದ್ದಿ, ಪ್ರೋತ್ಸಾಹಿಸಿ ತಮ್ಮ ಮೇಲೆಯೇ ನಂಬಿಕೆ ಇಡುವಂತೆ ಮಾಡಿದ ಎಲ್ಲ ಶಿಕ್ಷಕರಿಗೂ ಧನ್ಯವಾದಗಳು,” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.