-->
 ನ.1ರಂದು ವಿಶುಕುಮಾರ ಪ್ರಶಸ್ತಿ ಪ್ರದಾನ ಸಮಾರಂಭ

ನ.1ರಂದು ವಿಶುಕುಮಾರ ಪ್ರಶಸ್ತಿ ಪ್ರದಾನ ಸಮಾರಂಭ


ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ, ಯುವವಾಹಿನಿ ಉಡುಪಿ ಘಟಕದ ವತಿಯಿಂದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ಹಾಗೂ ವಿಶುಕುಮಾರ ದತ್ತಿನಿಧಿ ಸಮಿತಿ ಸಹಯೋಗದಲ್ಲಿ ನವೆಂಬರ್ 1ರಂದು ಉಡುಪಿಯ ಐವೈಸಿ ಸಭಾಂಗಣದಲ್ಲಿ ವಿಶುಕುಮಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಜಾನಪದ ಸಾಹಿತಿ ಬನ್ನಂಜೆ ಬಾಬು ಅಮೀನ್ ಅವರಿಗೆ ವಿಶುಕುಮಾರ ಪ್ರಶಸ್ತಿ ಹಾಗೂ ಉದಯೋನ್ಮುಖ ಸಾಹಿತಿ ತಜ್ಞಾ ಆರ್. ಅವರಿಗೆ ‘ಡಾ. ಪ್ರಭಾಕರ ನೀರಮಾರ್ಗ ಯುವವಾಹಿನಿ ಯುವ ಸಾಹಿತಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಅಶೋಕಕುಮಾರ ಪಡ್ಸು ತಿಳಿಸಿದರು.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಕಳ ನಕ್ರೆಯ ಹಿರಿಯ ಸಾಹಿತಿ ಬಿಪಿನ್ ಚಂದ್ರಪಾಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕಕುಮಾರ ಪಡ್ಸು ಅಧ್ಯಕ್ಷತೆ ವಹಿಸಲಿದ್ದಾರೆ. ಬಂಟ್ವಾಳ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಂ ಪೂಜಾರಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಗೋವಾ ಬಿಲ್ಲವ ಸಂಘದ ಗೌರವಾಧ್ಯಕ್ಷ ಚಂದ್ರಹಾಸ ಅಮೀನ್ ಹಾಗೂ ಬೆಂಗಳೂರಿನ ವಕೀಲೆ ವಿಜಯಲಕ್ಷ್ಮೀ ವಿಶುಕುಮಾರ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ದತ್ತಿನಿಧಿ ಸಂಚಾಲನಾ ಸಮಿತಿಯ ಸಂಚಾಲಕ ಜಗದೀಶ ಕುಮಾರ ಮಾತನಾಡಿ, ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸಮಾರಂಭದ ಅಂಗವಾಗಿ ಸಿನಿದನಿ ಕಿರುಚಿತ್ರ ಸ್ಪರ್ಧೆ, ಜ್ಞಾನಮಂಥನ ರಸಪ್ರಶ್ನೆ ಸ್ಪರ್ಧೆ, ವಿಶು ಕಾವ್ಯಾಮೃತ ಕವನ ಸ್ಪರ್ಧೆ ಹಾಗೂ ವಿಶು ವಿಹಂಗಮ ಕೃತಿ ವಿಮರ್ಶೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಗಳ ವಿಜೇತರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ದತ್ತಿನಿಧಿ ಸಂಚಾಲನಾ ಸಮಿತಿಯ ಸಹಸಂಚಾಲಕ ದಯಾನಂದ ಕರ್ಕೇರ ಉಗ್ಗೆಲಬೆಟ್ಟು, ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ವಿನೋದ ಮಂಚಿ ಹಾಗೂ ಸಮಿತಿಯ ಕೋಶಾಧಿಕಾರಿ ಸತೀಶ ಕಿಲ್ಪಾಡಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article