ಉಡುಪಿ: ಅಂಗಡಿ ಮಾಲೀಕನ ಮೇಲೆ ಆಸಿಡ್ ದಾಳಿ ಮಾಡಿದ ಆರೋಪಿ ಬಂಧನ
ಮನೆ ಮುಂಗಡ ಹಣದ ವಿಚಾರದಲ್ಲಿ ಉಂಟಾದ ವಿವಾದಕ್ಕೆ ಸಂಬಂಧಿಸಿ ಅಂಗಡಿ ಮಾಲೀಕನ ಮೇಲೆ ಆಸಿಡ್ ದಾಳಿ ನಡೆಸಿ, ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಆರೋಪಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಉಡುಪಿಯ ಕುಂಜಿಬೆಟ್ಟು ನಿವಾಸಿ ಸುರೇಶ್ ಆಚಾರ್ಯ (48) ಎಂದು ಗುರುತಿಸಲಾಗಿದೆ.
ಉಡುಪಿಯ ಶಿವಳ್ಳಿ ಗ್ರಾಮದ ಕಲ್ಕೂರು ಬಿಲ್ಡಿಂಗ್ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಅಂಗಡಿ ಹೊಂದಿರುವ ನವೀನ್ ಕುಮಾರ್ (58) ಅವರು ವಿಷ್ಣುಮೂರ್ತಿ ನಗರದ ತಮ್ಮ ಮನೆಯ ಮೊದಲ ಮಹಡಿಯನ್ನು ಸುರೇಶ್ ಆಚಾರ್ಯ ಅವರಿಗೆ ಬಾಡಿಗೆಗೆ ನೀಡಿದ್ದರು. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಗೋಡೆ ಹಾಗೂ ಟ್ಯಾಪ್ ಹಾನಿಯಾಗಿದ್ದರಿಂದ, ಮುಂಗಡವಾಗಿ ನೀಡಿದ್ದ 20 ಸಾವಿರದಲ್ಲಿ ಎರಡು ತಿಂಗಳ ಬಾಡಿಗೆ ಹಾಗೂ ದುರಸ್ತಿ ವೆಚ್ಚವನ್ನು ಕಡಿತಗೊಳಿಸುವುದಾಗಿ ನವೀನ್ ಕುಮಾರ್ ತಿಳಿಸಿದ್ದರು. ಇದಕ್ಕೆ ಒಪ್ಪದ ಸುರೇಶ್ ಆಚಾರ್ಯ, ಸಂಪೂರ್ಣ ಮುಂಗಡ ಹಣ ನೀಡುವಂತೆ ಒತ್ತಾಯಿಸಿ ಅ.23ರಂದು ಅಂಗಡಿಗೆ ಬಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಅ.28ರಂದು ಸಂಜೆ ಸುಮಾರು 3.30ಕ್ಕೆ ಸುರೇಶ್ ಆಚಾರ್ಯ ಅಂಗಡಿಗೆ ಬಂದು ಮುಂಗಡ ಹಣದ ವಿಚಾರವಾಗಿ ನವೀನ್ ಕುಮಾರ್ ಅವರೊಂದಿಗೆ ಜಗಳವಾಡಿದ್ದಾನೆ. ಬಳಿಕ ಹೊರಗೆ ಹೋಗಿ ಸ್ಕೂಟರ್‌ನಿಂದ ಬಾಟಲಿಯೊಂದರಲ್ಲಿ ತಂದಿದ್ದ ಆಸಿಡ್ ಎರಚಿ, ತಲವಾರಿನಿಂದ ಕಡಿದು ಹಲ್ಲೆ ನಡೆಸಲು ಮುಂದಾಗಿದ್ದಾನೆ ಎನ್ನಲಾಗಿದೆ. ಆಸಿಡ್ ದಾಳಿಯಿಂದ ನವೀನ್ ಕುಮಾರ್ ಅವರ ಬಲಗೈ, ಎಡಗೈ, ಸೊಂಟ, ಹೊಟ್ಟೆ, ಪಾದ ಹಾಗೂ ಮುಖದ ಭಾಗಗಳಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯ ಸುಟ್ಟ ಗಾಯಗಳ ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಲು ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಶಿವಳ್ಳಿ ಗ್ರಾಮದ ಎಂಜಿಎಂ ಮೈದಾನದ ಬಳಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ. ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ ಆಕ್ಟಿವಾ ಸ್ಕೂಟರ್ ಹಾಗೂ ತಲವಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ಮನೆಯಲ್ಲಿ ಚಿನ್ನ-ಬೆಳ್ಳಿಯ ಕುಸುರಿ ಕೆಲಸ ಮಾಡಿಕೊಂಡಿರುವುದರ ಜೊತೆಗೆ ಸ್ವಿಗ್ಗಿ ಡೆಲಿವರಿ ಬಾಯ್ ಆಗಿಯೂ ಅರೆಕಾಲಿಕ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಭರತೇಶ್ ಕಂಕಣವಾಡಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಪ್ರಸನ್ನ ಸಿ., ಲೋಕೇಶ್, ಅಬ್ದುಲ್ ಬಶೀರ್, ಹೇಮಂತ್ ಕುಮಾರ್, ಆನಂದ್ ಎಸ್., ಆನಂದಯ್ಯ ಹಾಗೂ ನೇತ್ರಾವತಿ ಪಾಲ್ಗೊಂಡಿದ್ದರು.