-->
 ‘ಶ್ರೀದೇವಿ’ಯಾದ ಆರ್ಷಿಯಾ ಖಾನ್: ಧರ್ಮದ ಗಡಿ ದಾಟಿದ ಕಲಾಭಕ್ತಿ; 12 ವರ್ಷಗಳ ಯಕ್ಷ ಪಯಣಕ್ಕೆ ಹೊಸ ಮುಕುಟ

‘ಶ್ರೀದೇವಿ’ಯಾದ ಆರ್ಷಿಯಾ ಖಾನ್: ಧರ್ಮದ ಗಡಿ ದಾಟಿದ ಕಲಾಭಕ್ತಿ; 12 ವರ್ಷಗಳ ಯಕ್ಷ ಪಯಣಕ್ಕೆ ಹೊಸ ಮುಕುಟ


ಕಲೆ ಯಾರ ಸ್ವತ್ತೂ ಅಲ್ಲ.. ಅದಕ್ಕೆ ಜಾತಿಯಿಲ್ಲ, ಧರ್ಮದ ಹಂಗಿಲ್ಲ.. ಗಡಿಯೆಂಬ ಪರಿದಿಯೂ ಇಲ್ಲ. ಕಲೆಯ ಮೇಲಿನ ಪ್ರೀತಿ ಮತ್ತು ಪಾತ್ರದ ಮೇಲಿನ ಭಕ್ತಿಯೇ ಕಲಾವಿದನ ನಿಜವಾದ ಗುರುತು. ಇದಕ್ಕೆ ಕರಾವಳಿಯ ಯಕ್ಷಗಾನ ರಂಗ ಮತ್ತೊಮ್ಮೆ ಸಾಕ್ಷಿಯಾಗುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವ ಯಕ್ಷಗಾನ ಕಲಾವಿದೆ ಆರ್ಷಿಯಾ ಖಾನ್ ಅವರು ಇದೇ ಅಕ್ಟೋಬರ್ 20ರಂದು ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ‘ಶ್ರೀದೇವಿ’ಯಾಗಿ ರಂಗಪ್ರವೇಶಿಸಲಿದ್ದಾರೆ.


ದೇವಿ ಮಹಾತ್ಮೆಯ ಪ್ರಸಂಗದಲ್ಲಿ ಸಾಕ್ಷಾತ್ ಶ್ರೀದೇವಿಯ ಪಾತ್ರಕ್ಕೆ ಜೀವ ತುಂಬಲಿರುವ ಆರ್ಷಿಯಾ ಅವರ ಈ ಹೆಜ್ಜೆ, ಅವರ ಕಲಾ ಬದುಕಿನ ಮತ್ತೊಂದು ಮೈಲಿಗಲ್ಲು ಮಾತ್ರವಲ್ಲ; ಕಲೆ ಮತ್ತು ಕಲಾಭಿಮಾನಕ್ಕೆ ಧರ್ಮದ ಎಲ್ಲೆ ಇಲ್ಲ ಎಂಬುದನ್ನು ಸಾರುವ ಅಪರೂಪದ ಕ್ಷಣವೂ ಹೌದು. 


ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಆರ್ಷಿಯಾ ಖಾನ್ ಅವರಿಗೆ ಯಕ್ಷಗಾನದ ನಂಟು ಇಂದು-ನಿನ್ನೆಯದಲ್ಲ. ಬಾಲ್ಯದಲ್ಲೇ ತಮ್ಮ ಮನೆಯ ಆಸುಪಾಸಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಾ ಬೆಳೆದ ಅವರಿಗೆ, ರಂಗಸ್ಥಳದ ಬಣ್ಣ, ವೇಷಭೂಷಣ, ಮಾತುಗಾರಿಕೆ ಹಾಗೂ ಚಂಡೆ-ಮದ್ದಳೆಯ ನಾದ ವಿಶೇಷ ಆಕರ್ಷಣೆಯಾಗಿತ್ತು.

ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ, ಕೇವಲ 9ನೇ ವಯಸ್ಸಿನಲ್ಲೇ ಯಕ್ಷಗಾನ ಕಲಿಯಲು ಆರಂಭಿಸಿದರು. ಮಗಳಲ್ಲಿದ್ದ ಕಲಾ ಆಸಕ್ತಿಯನ್ನು ಗುರುತಿಸಿದ ತಂದೆ, ನಿವೃತ್ತ ಉಪ ತಹಸೀಲ್ದಾರ್ ಅಬ್ದುಲ್ ಖಾದರ್ ಹಾಗೂ ತಾಯಿ ಮುಮ್ತಾಜ್, ಆಕೆಯ ಕಲಾ ಪಯಣಕ್ಕೆ ಬೆನ್ನೆಲುಬಾಗಿ ನಿಂತರು. ಪೋಷಕರ ಪ್ರೋತ್ಸಾಹ, ಗುರುವಿನ ಮಾರ್ಗದರ್ಶನ ಹಾಗೂ ಸ್ವಂತ ಪರಿಶ್ರಮದಿಂದ ಆರ್ಷಿಯಾ ಕಳೆದ 12 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.


ಯಕ್ಷಗಾನದ ಸೂಕ್ಷ್ಮತೆಗಳನ್ನು ಗುರು ಕದ್ರಿ ರಮೇಶ್ ಭಟ್ ಅವರಲ್ಲಿ ಕಲಿತಿರುವ ಆರ್ಷಿಯಾ, ಇದೀಗ ಕದಳಿ ಕಲಾ ಕೇಂದ್ರದ ಸದಸ್ಯೆಯಾಗಿದ್ದಾರೆ. ರಂಗದಲ್ಲಿ ತಮ್ಮ ಅಭಿನಯ ಸಾಮರ್ಥ್ಯವನ್ನು ಈಗಾಗಲೇ ಹಲವು ಪಾತ್ರಗಳ ಮೂಲಕ ಸಾಬೀತುಪಡಿಸಿರುವ ಅವರು, ಮಹಿಷಾಸುರ, ಶುಂಭ, ನಿಶುಂಭ ಮುಂತಾದ ಖಳನಾಯಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದಿಮಾಯೆಯಂತಹ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ.

ಖಳನಾಯಕ ಪಾತ್ರಗಳ ಮೂಲಕ ರಂಗದಲ್ಲಿ ಅಬ್ಬರಿಸಿದ್ದ ಇದೇ ಕಲಾವಿದೆ ಇದೀಗ ಸಾತ್ವಿಕತೆ, ಶಕ್ತಿ ಹಾಗೂ ಭಕ್ತಿಯ ಪ್ರತಿರೂಪವಾದ ಶ್ರೀದೇವಿಯ ಪಾತ್ರವನ್ನು ಹೊತ್ತುಕೊಳ್ಳುತ್ತಿದ್ದಾರೆ.

ಒಂದು ಪಾತ್ರವನ್ನು ನಿರ್ವಹಿಸುವುದು ಬೇರೆ; ಆ ಪಾತ್ರವನ್ನು ಮನಸ್ಸಿನಲ್ಲಿ ಆವಾಹಿಸಿಕೊಂಡು ರಂಗಕ್ಕೆ ತರುವುದು ಬೇರೆ. ಆರ್ಷಿಯಾ ಅವರ ಪಾಲಿಗೆ ಶ್ರೀದೇವಿಯ ಪಾತ್ರ ಕೇವಲ ಅಭಿನಯವಲ್ಲ. ಅದೊಂದು ಕಲಾ ಸಾಧನೆ. ಪಾತ್ರದ ಪಾವಿತ್ರ್ಯವನ್ನು ಗೌರವಿಸುವ ಉದ್ದೇಶದಿಂದ ಅವರು ಕಳೆದ ಕೆಲವು ತಿಂಗಳುಗಳಿಂದ ಸಾತ್ವಿಕ ಸಸ್ಯಾಹಾರಿ ಆಹಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ವ್ರತಾಚರಣೆಯನ್ನೂ ಕೈಗೊಂಡಿದ್ದಾರೆ.

ಯಕ್ಷಗಾನ ಕಲಾವಿದೆಯಾಗಿ ಪಾತ್ರದ ಆಂತರಿಕ ಭಾವವನ್ನು ಅರಿತು, ಅದಕ್ಕೆ ತಕ್ಕಂತೆ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿರುವ ಆರ್ಷಿಯಾ ಅವರ ಈ ಕಲಾಭಕ್ತಿ ಗಮನ ಸೆಳೆಯುತ್ತಿದೆ. ದಸರಾ ಅಂಗವಾಗಿ ಕದ್ರಿ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಕದಳಿ ಕಲಾ ಕೇಂದ್ರದ 14ನೇ ವರ್ಷದ ‘ಕದಳಿ ದಶಾಹ’ 10 ದಿನಗಳ ಯಕ್ಷಗಾನ ಕಾರ್ಯಕ್ರಮ ಅಕ್ಟೋಬರ್ 11ರಿಂದ 20ರವರೆಗೆ ನಡೆಯಲಿದೆ. ಅಕ್ಟೋಬರ್ 20ರಂದು ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಆರ್ಷಿಯಾ ಖಾನ್ ಅವರು ಮೊದಲ ಬಾರಿಗೆ ಶ್ರೀದೇವಿಯಾಗಿ ರಂಗಸ್ಥಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಹಿಷಾಸುರನ ಅಬ್ಬರ, ಶುಂಭ-ನಿಶುಂಭರ ರೌದ್ರತೆ, ಆದಿಮಾಯೆಯ ಭಾವಪೂರ್ಣತೆ... ಹೀಗೆ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಆರ್ಷಿಯಾ, ಇದೀಗ ಶ್ರೀದೇವಿಯ ದೈವಿಕ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದು ಕರಾವಳಿಯ ಮಣ್ಣಿನಲ್ಲಿರುವ ಸಹಬಾಳ್ವೆ, ಸೌಹಾರ್ದತೆ ಮತ್ತು ಕಲಾ ಪರಂಪರೆಯ ವೈವಿಧ್ಯತೆಯ ಪ್ರತಿಬಿಂಬವೂ ಹೌದು.

Ads on article

Advertise in articles 1

advertising articles 2

Advertise under the article