-->
ರೋಗಿಯ ಬದುಕಿನ ಕೊನೆಯ ಪಯಣಕ್ಕೆ ಗೌರವದ ಸ್ಪರ್ಶ ನೀಡುವ ‘ಮಣಿಪಾಲ ಹಾಸ್ಪೈಸ್ ಸೆಂಟರ್'

ರೋಗಿಯ ಬದುಕಿನ ಕೊನೆಯ ಪಯಣಕ್ಕೆ ಗೌರವದ ಸ್ಪರ್ಶ ನೀಡುವ ‘ಮಣಿಪಾಲ ಹಾಸ್ಪೈಸ್ ಸೆಂಟರ್'


ಮಾರಣಾಂತಿಕ ಕಾಯಿಲೆ ಗುಣವಾಗದಿರಬಹುದು.. ಆದರೆ ರೋಗಿಯ ನೋವನ್ನು ಕಡಿಮೆ ಮಾಡಬಹುದು.. ಜೀವನದ ದಿನಗಳನ್ನು ಹೆಚ್ಚಿಸಲು ಸಾಧ್ಯವಾಗದಿರಬಹುದು... ಆದರೆ ಉಳಿದ ದಿನಗಳನ್ನು ನೆಮ್ಮದಿಯಿಂದ ಕಳೆಯಲು ನೆರವಾಗಬಹುದು. ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗೆ ಈ ಸಣ್ಣ ಕಾಳಜಿಯೇ ದೊಡ್ಡ ಆಸರೆಯಾಗುತ್ತದೆ. ರೋಗಿಯ ನೋವಿನ ಜೊತೆಗೆ ಕುಟುಂಬದ ಕಣ್ಣೀರನ್ನೂ ಅರ್ಥಮಾಡಿಕೊಳ್ಳುವ ಇಂತಹ ಮಾನವೀಯ ಸೇವೆ ಮಣಿಪಾಲದಲ್ಲಿ ನಡೆಯುತ್ತಿದೆ.


ಮಣಿಪಾಲದ ಮಣಿಪಾಲ ಹಾಸ್ಪಿಸ್ ಆ್ಯಂಡ್ ರೆಸ್ಪೈಟ್ ಸೆಂಟರ್ (MHRC) ಗಂಭೀರ ಕಾಯಿಲೆ ಎದುರಿಸುತ್ತಿರುವವರಿಗೆ ಕೇವಲ ಚಿಕಿತ್ಸೆ ನೀಡುವ ಕೇಂದ್ರವಲ್ಲ. ಬದುಕಿನ ಕಷ್ಟದ ಸಮಯದಲ್ಲಿ ರೋಗಿಯ ಜೊತೆಗೆ ನಿಂತು, ಅವರ ನೋವು ಕಡಿಮೆ ಮಾಡಿ, ಉಳಿದ ದಿನಗಳನ್ನು ಗೌರವದಿಂದ ಕಳೆಯಲು ನೆರವಾಗುವ ಆರೈಕೆಯ ತಾಣವಾಗಿದೆ.

ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇಲ್ಲಿ ಆರೈಕೆ ನೀಡಲಾಗುತ್ತದೆ. ಕೆಲವೊಮ್ಮೆ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ರೋಗಿಗೆ ಮತ್ತೆ ಮತ್ತೆ ಕಠಿಣ ಚಿಕಿತ್ಸೆ ನೀಡುವುದಕ್ಕಿಂತ, ಅವರ ನೋವು ಕಡಿಮೆ ಮಾಡಿ ನೆಮ್ಮದಿಯಿಂದ ಇರುವಂತೆ ಮಾಡುವುದು ಮುಖ್ಯವಾಗುತ್ತದೆ.

ವೈದ್ಯರು, ನರ್ಸ್‌ಗಳು, ಪುನರ್ವಸತಿ ತಜ್ಞರು ಹಾಗೂ ಮಾನಸಿಕ ಮತ್ತು ಸಾಮಾಜಿಕ ಬೆಂಬಲ ನೀಡುವ ಸಿಬ್ಬಂದಿ ಒಟ್ಟಾಗಿ ರೋಗಿಯ ಆರೈಕೆ ಮಾಡುತ್ತಾರೆ. ರೋಗಿಯ ದೇಹದ ನೋವಿಗೆ ಮಾತ್ರವಲ್ಲ, ಅವರ ಮನಸ್ಸಿನ ನೋವಿಗೂ ಇಲ್ಲಿ ಸ್ಪಂದಿಸಲಾಗುತ್ತದೆ.

ಒಬ್ಬ ವ್ಯಕ್ತಿ ಗಂಭೀರ ಕಾಯಿಲೆಗೆ ಒಳಗಾದಾಗ ನೋವು ಅನುಭವಿಸುವುದು ಆ ವ್ಯಕ್ತಿ ಮಾತ್ರವಲ್ಲ. ಅವರ ಕುಟುಂಬವೂ ಅದರ ಜೊತೆಗೆ ಹೋರಾಡುತ್ತದೆ. ಹಗಲು-ರಾತ್ರಿ ರೋಗಿಯ ಆರೈಕೆ ಮಾಡುತ್ತಾ ಕುಟುಂಬದವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಾರೆ. ಇಂತಹ ಸಂದರ್ಭದಲ್ಲಿ MHRCಯ ರೆಸ್ಪೈಟ್ ಕೇರ್ ಕುಟುಂಬದವರಿಗೆ ನೆರವಾಗುತ್ತದೆ.

ಕೆಲವು ದಿನಗಳ ಕಾಲ ರೋಗಿಯನ್ನು ಕೇಂದ್ರದಲ್ಲೇ ನೋಡಿಕೊಳ್ಳುವುದರಿಂದ ಕುಟುಂಬದವರಿಗೆ ವಿಶ್ರಾಂತಿ ಪಡೆಯಲು ಅವಕಾಶ ಸಿಗುತ್ತದೆ. ರೋಗಿಯ ನಿಧನದ ನಂತರವೂ ಕುಟುಂಬದವರ ದುಃಖವನ್ನು ಅರ್ಥಮಾಡಿಕೊಂಡು ಅವರಿಗೆ ಅಗತ್ಯ ಮಾನಸಿಕ ಬೆಂಬಲ ನೀಡಲಾಗುತ್ತದೆ.

2025ರ ಏಪ್ರಿಲ್‌ನಲ್ಲಿ ಆರಂಭಗೊಂಡ MHRCಯಲ್ಲಿ ಸೆಪ್ಟೆಂಬರ್‌ನಿಂದ ರೋಗಿಗಳ ದಾಖಲಾತಿ ಪ್ರಾರಂಭವಾಯಿತು. ಕೇವಲ 10 ಹಾಸಿಗೆಗಳಿಂದ ಆರಂಭವಾದ ಕೇಂದ್ರ ಈಗ 40 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಮೊದಲ ಒಂದು ವರ್ಷದಲ್ಲೇ 694 ರೋಗಿಗಳಿಗೆ ಆರೈಕೆ ನೀಡಲಾಗಿದೆ. ಅಲ್ಲದೆ, 1,300ಕ್ಕೂ ಹೆಚ್ಚು ಕುಟುಂಬದ ಆರೈಕೆದಾರರಿಗೆ ಬೆಂಬಲ ನೀಡಲಾಗಿದೆ.

ಈ ಕೇಂದ್ರದ ಮತ್ತೊಂದು ವಿಶೇಷತೆ ಎಂದರೆ ಇಲ್ಲಿ ಸೇವೆ ಸಂಪೂರ್ಣ ಉಚಿತ.ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉತ್ತಮ ಆರೈಕೆ ಪಡೆಯಲು ಹಣ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ MHRC ಕಾರ್ಯನಿರ್ವಹಿಸುತ್ತಿದೆ. ವಿವಿಧ ಸಂಸ್ಥೆಗಳು ಮತ್ತು ದಾನಿಗಳ ಸಹಕಾರದಿಂದ ಈ ಮಾನವೀಯ ಸೇವೆ ಮುಂದುವರಿಯುತ್ತಿದೆ.

ಕೆಲವೊಮ್ಮೆ ಒಂದು ಔಷಧಿ ನೋವನ್ನು ಕಡಿಮೆ ಮಾಡಬಹುದು. ಆದರೆ ಒಂದು ಸಾಂತ್ವನದ ಮಾತು ಮನಸ್ಸಿನ ನೋವನ್ನು ಕಡಿಮೆ ಮಾಡಬಹುದು. ಕೆಲವೊಮ್ಮೆ ವೈದ್ಯರ ಚಿಕಿತ್ಸೆಗಿಂತ, ‘ನಾವು ನಿಮ್ಮೊಂದಿಗಿದ್ದೇವೆ’ ಎಂಬ ಭರವಸೆಯೇ ರೋಗಿಗೆ ದೊಡ್ಡ ಧೈರ್ಯವಾಗಬಹುದು. ಬದುಕಿನ ಕೊನೆಯ ಹಂತದಲ್ಲಿರುವ ವ್ಯಕ್ತಿಯನ್ನು ಒಂಟಿಯಾಗಿ ಬಿಡದೆ, ಅವರ ಕೈಹಿಡಿದು, ನೋವಿನ ನಡುವೆ ನೆಮ್ಮದಿ ನೀಡುವುದು ಕೂಡ ಒಂದು ರೀತಿಯ ಚಿಕಿತ್ಸೆಯೇ.

ಮಣಿಪಾಲದ MHRC ಇದೇ ಮಾನವೀಯ ಸಂದೇಶವನ್ನು ತನ್ನ ಸೇವೆಯ ಮೂಲಕ ಸಾರುತ್ತಿದೆ. ಕಾಯಿಲೆಯನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ನೋವಿನ ವಿರುದ್ಧ ಹೋರಾಡಬಹುದು. ದಿನಗಳನ್ನು ಹೆಚ್ಚಿಸಲು ಸಾಧ್ಯವಾಗದಿದ್ದರೂ, ಉಳಿದ ದಿನಗಳನ್ನು ಸುಂದರವಾಗಿಸಬಹುದು.

Ads on article

Advertise in articles 1

advertising articles 2

Advertise under the article