-->
 ಉಡುಪಿ: 2,925 ಶಸ್ತ್ರಾಸ್ತ್ರಗಳ ತಪಾಸಣೆ; 4 ಅನಧಿಕೃತ ಮಾರ್ಪಾಡು ಮಾಡಲಾದ ಶಸ್ತ್ರಾಸ್ತ್ರ ಪತ್ತೆ

ಉಡುಪಿ: 2,925 ಶಸ್ತ್ರಾಸ್ತ್ರಗಳ ತಪಾಸಣೆ; 4 ಅನಧಿಕೃತ ಮಾರ್ಪಾಡು ಮಾಡಲಾದ ಶಸ್ತ್ರಾಸ್ತ್ರ ಪತ್ತೆ


ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಶಸ್ತ್ರಾಸ್ತ್ರಗಳ ಬಳಕೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾದ್ಯಂತ ಶಸ್ತ್ರಾಸ್ತ್ರಗಳ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಗಿದೆ. ತಪಾಸಣೆಯ ಸಂದರ್ಭದಲ್ಲಿ ನಾಲ್ಕು ಶಸ್ತ್ರಾಸ್ತ್ರಗಳಲ್ಲಿ ಅನಧಿಕೃತ ಮಾರ್ಪಾಡು ಮಾಡಿರುವುದು ಪತ್ತೆಯಾಗಿದೆ.


ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ ಹೊಂದಿರುವ ವ್ಯಕ್ತಿಗಳ ಹಿನ್ನೆಲೆ, ಶಸ್ತ್ರಾಸ್ತ್ರಗಳ ಸ್ಥಿತಿ ಹಾಗೂ ಅವುಗಳಲ್ಲಿ ಯಾವುದೇ ರೀತಿಯ ಅನಧಿಕೃತ ಮಾರ್ಪಾಡು ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಯಿತು. ಈ ವೇಳೆ ಜಿಲ್ಲಾದ್ಯಂತ ಒಟ್ಟು 2,925 ಶಸ್ತ್ರಾಸ್ತ್ರಗಳನ್ನು ತಪಾಸಣೆ ನಡೆಸಲಾಗಿದೆ.


ತಪಾಸಣೆಯಲ್ಲಿ 1,759 SBML, 554 SBBL, 318 DBBL, 6 DBML, 120 ಪಿಸ್ತೂಲ್, 119 ರಿವಾಲ್ವರ್, 30 ರೈಫಲ್, 13 ಬೋರ್ ಗನ್ ಹಾಗೂ 6 NP ಬೋರ್ ಶಸ್ತ್ರಾಸ್ತ್ರಗಳು ಸೇರಿವೆ. ತಪಾಸಣೆಯ ಸಂದರ್ಭದಲ್ಲಿ ನಾಲ್ಕು ಶಸ್ತ್ರಾಸ್ತ್ರಗಳಲ್ಲಿ ಅನಧಿಕೃತ ಮಾರ್ಪಾಡು ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಶಂಕರನಾರಾಯಣ, ಕೋಟ, ಬ್ರಹ್ಮಾವರ ಹಾಗೂ ಕಾರ್ಕಳ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಅನಧಿಕೃತವಾಗಿ ಶಸ್ತ್ರಾಸ್ತ್ರಗಳಲ್ಲಿ ಮಾರ್ಪಾಡು ಮಾಡಿದ ಆರೋಪಿಗಳ ವಿರುದ್ಧ Indian Arms Act-1959ರ ಕಲಂ 25ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಇದಲ್ಲದೆ, ರೌಡಿ ಹಾಳೆ ಹೊಂದಿರುವ ಹಾಗೂ ಶಸ್ತ್ರಾಸ್ತ್ರ ಪರವಾನಗಿ ಪಡೆದಿರುವ ವ್ಯಕ್ತಿಗಳ ಪ್ರಸ್ತುತ ನಡವಳಿಕೆ ಮತ್ತು ಶಸ್ತ್ರಾಸ್ತ್ರ ಹೊಂದಿದ ಬಳಿಕ ಅವರು ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ವಿಶೇಷ ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಶಸ್ತ್ರಾಸ್ತ್ರಗಳ ಅಕ್ರಮ ಬಳಕೆ ಮತ್ತು ಅನಧಿಕೃತ ಮಾರ್ಪಾಡುಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ನಿರಂತರ ನಿಗಾ ವಹಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ತಿಳಿಸಿದೆ.

ಅನಧಿಕೃತ ಶಸ್ತ್ರಾಸ್ತ್ರ ಬಳಕೆ, ಮಾರ್ಪಾಡು ಅಥವಾ ಸಂಗ್ರಹದ ಕುರಿತು ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಗೆ ಅಥವಾ ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 0820-2526444, 0820-2526709 ಹಾಗೂ ವಾಟ್ಸ್‌ಆ್ಯಪ್ ಸಂಖ್ಯೆ 9480805400ಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. 

Ads on article

Advertise in articles 1

advertising articles 2

Advertise under the article