ಇಂದು ಉಚ್ಚಿಲ ದಸರಾ ಶೋಭಾಯಾತ್ರೆ: ಕಾಪು ಬೀಚ್ನಲ್ಲಿ ಗಂಗಾರತಿ, ಲೇಸರ್ ಶೋ: 2 ಲಕ್ಷಕ್ಕೂ ಅಧಿಕ ಭಕ್ತರ ನಿರೀಕ್ಷೆ
ಪಂಚಮ ವರ್ಷದ ಉಡುಪಿ ಉಚ್ಚಿಲ ದಸರಾ-2026 ಮಹೋತ್ಸವದ ವಿಜಯದಶಮಿ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ನಡೆಯಲಿರುವ ವಿಶ್ವಪ್ರಸಿದ್ಧ ಉಚ್ಚಿಲ ದಸರಾ ಶೋಭಾಯಾತ್ರೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಎರಡು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಶಿಸ್ತುಬದ್ಧ ಮೆರವಣಿಗೆ, ಆಕರ್ಷಕ ಟ್ಯಾಬ್ಲೊಗಳು, ಡ್ರೋನ್ ಮೂಲಕ ಪುಷ್ಪವೃಷ್ಟಿ ಹಾಗೂ ಕಾಪು ಬೀಚ್ನಲ್ಲಿ ನಡೆಯಲಿರುವ ಗಂಗಾರತಿ, ಲೇಸರ್ ಪ್ರದರ್ಶನ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಲಿವೆ.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವ ಐದನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ ನಾಲ್ಕು ವರ್ಷಗಳ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿಯ ಶೋಭಾಯಾತ್ರೆಯನ್ನು ಇನ್ನಷ್ಟು ವೈಭವದಿಂದ ಆಯೋಜಿಸಲಾಗಿದೆ. ಮೆರವಣಿಗೆಯ ಸುಗಮ ನಿರ್ವಹಣೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅ. 21ರಂದು ಮಧ್ಯಾಹ್ನ 2.30ಕ್ಕೆ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹಗಳಿಗೆ ವಿಸರ್ಜನಾ ಪೂಜೆ ನೆರವೇರಲಿದೆ. ಮಧ್ಯಾಹ್ನ 3 ಗಂಟೆಗೆ ವಿಗ್ರಹಗಳನ್ನು ವಾಹನಗಳಿಗೆ ಸ್ಥಳಾಂತರಿಸಿ, 3.30ಕ್ಕೆ ಶೋಭಾಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಮೊದಲ ಉಚ್ಚಿಲ ದಸರಾ ಮಹೋತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನಡೆಸಲಾಗಿದ್ದರೆ, ಈ ಬಾರಿ ಡ್ರೋನ್ ಮೂಲಕ ಪುಷ್ಪವೃಷ್ಟಿ ಮಾಡುವ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಶೋಭಾಯಾತ್ರೆಯಲ್ಲಿ 100ಕ್ಕೂ ಅಧಿಕ ವಾಹನಗಳು ಭಾಗವಹಿಸಲಿದ್ದು, ತುಳುನಾಡಿನ ಸಂಸ್ಕೃತಿ, ಮೀನುಗಾರಿಕೆ ಹಾಗೂ ಮೊಗವೀರ ಸಮಾಜದ ಪರಂಪರೆಯನ್ನು ಪ್ರತಿಬಿಂಬಿಸುವ ಆಕರ್ಷಕ ಟ್ಯಾಬ್ಲೊಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಬೆಣ್ಣೆಕುದ್ರು ದೇವಸ್ಥಾನ, ಮೊಗವೀರ ಸಮಾಜದ ಕುಲಗುರು ಮಾಧವ ಮಂಗಳ ಪೂಜಾರ್ಯ ಹಾಗೂ ಸದಿಯ ಸಾಹುಕಾರರ ಪರಂಪರೆಯನ್ನು ಬಿಂಬಿಸುವ ಟ್ಯಾಬ್ಲೊಗಳು ಗಮನ ಸೆಳೆಯಲಿವೆ.
ಕೊಂಬು, ಕಹಳೆ, ವಿವಿಧ ವಾದ್ಯಗಳು, ಡಿಜೆ ಸಂಗೀತ ಹಾಗೂ ಜಾನಪದ ಕಲಾಪ್ರದರ್ಶನಗಳು ಮೆರವಣಿಗೆಗೆ ವಿಶೇಷ ಕಳೆ ನೀಡಲಿವೆ. ಭಕ್ತರಿಗೆ ಕುಡಿಯುವ ನೀರು ಪೂರೈಸಲು ಐದು ವಾಹನಗಳು ಹಾಗೂ ಸ್ವಚ್ಛತಾ ಕಾರ್ಯಕ್ಕಾಗಿ ಐದು ವಾಹನಗಳನ್ನು ನಿಯೋಜಿಸಲಾಗಿದೆ. ಮಾರ್ಗದುದ್ದಕ್ಕೂ ಪಾನೀಯದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಶೋಭಾಯಾತ್ರೆಯು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66ರ ಪೂರ್ವಭಾಗದಲ್ಲಿ ದಕ್ಷಿಣದತ್ತ ಸಾಗಲಿದೆ. ಎರ್ಮಾಳು ಮಸೀದಿ ಸಮೀಪ ಯು-ಟರ್ನ್ ಪಡೆದು ಉಚ್ಚಿಲ, ಮೂಳೂರು ಮೂಲಕ ಕಾಪುವಿನತ್ತ ತೆರಳಲಿದೆ. ಬಳಿಕ ಕಾಪು-ಕೊಪ್ಪಲಂಗಡಿ ಬಳಿ ಹೆದ್ದಾರಿಯಿಂದ ಬೀಚ್ ರಸ್ತೆಗೆ ತಿರುಗಿ ಕಾಪು ಬೀಚ್ ತಲುಪಲಿದೆ.
ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹಗಳ ಟ್ಯಾಬ್ಲೊಗಳು ಮಾತ್ರ ಬೀಚ್ ರಸ್ತೆಯಲ್ಲಿ ಸಾಗಲಿದ್ದು, ಉಳಿದ ಟ್ಯಾಬ್ಲೊಗಳು ಕೊಪ್ಪಲಂಗಡಿಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ತಮ್ಮ ನಿಗದಿತ ಸ್ಥಳಗಳಿಗೆ ಮರಳಲಿವೆ.
ಕಾಪು ದೀಪಸ್ತಂಭದ ಸಮೀಪದ ಬೀಚ್ನಲ್ಲಿ ಕಾಶಿಯ ಪಂಡಿತರಿಂದ ಗಂಗಾರತಿ ಹಾಗೂ ಸಮುದ್ರಾರತಿ ನಡೆಯಲಿದೆ. ಸುಮಂಗಲೆಯರಿಂದ ಸಾಮೂಹಿಕ ಆರತಿ ನೆರವೇರಲಿದೆ. ಸಮುದ್ರದ ಮಧ್ಯೆ 50ಕ್ಕೂ ಅಧಿಕ ವಿದ್ಯುದ್ದೀಪಾಲಂಕೃತ ಬೋಟುಗಳಿಂದ ಸುಡುಮದ್ದು ಪ್ರದರ್ಶನ, ಲೇಸರ್ ಲೈಟ್ ಶೋ ಹಾಗೂ ಸಂಗೀತ ರಸಮಂಜರಿ ಆಯೋಜಿಸಲಾಗಿದೆ. ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾಂಸ್ಕೃತಿಕ ಮತ್ತು ಕಲಾತ್ಮಕ ವೈಭವದ ಮೂಲಕ ಉಚ್ಚಿಲ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ದಸರಾ ಮಹೋತ್ಸವದ ರೂವಾರಿ ಹಾಗೂ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಮಾತನಾಡಿ, ಶ್ರೀ ಮಹಾಲಕ್ಷ್ಮೀ ದೇವಿಯ ಕೃಪೆಯಿಂದ 11 ದಿನಗಳ ಐತಿಹಾಸಿಕ ಉಚ್ಚಿಲ ದಸರಾ ಮಹೋತ್ಸವ ಸುಸೂತ್ರವಾಗಿ ನಡೆಯುತ್ತಿದೆ. ವಿಶ್ವಪ್ರಸಿದ್ಧ ಶೋಭಾಯಾತ್ರೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ನಿಗದಿತ ಸಮಯದಲ್ಲಿ ಮೆರವಣಿಗೆ ಹಾಗೂ ವಿಗ್ರಹ ವಿಸರ್ಜನಾ ಕಾರ್ಯಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಪಂಚಮ ವರ್ಷದ ಶೋಭಾಯಾತ್ರೆಯನ್ನು ವಿಭಿನ್ನವಾಗಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಯಂಸೇವಕರು ಹಗಲಿರುಳು ಶ್ರಮಿಸುತ್ತಿದ್ದು, ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ ಮಾತನಾಡಿ, ಶೋಭಾಯಾತ್ರೆಯ ಸುಗಮ ನಿರ್ವಹಣೆಗಾಗಿ 250ಕ್ಕೂ ಅಧಿಕ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಾರ್ವಜನಿಕರು ಸಂಘಟಕರು ಸೂಚಿಸಿರುವ ಸ್ಥಳಗಳಲ್ಲೇ ವಾಹನಗಳನ್ನು ನಿಲುಗಡೆ ಮಾಡಿ, ಪೊಲೀಸ್ ಇಲಾಖೆ ಹಾಗೂ ಸ್ವಯಂಸೇವಕರ ಸೂಚನೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಉಡುಪಿ ಕಡೆಯಿಂದ ಆಗಮಿಸುವ ವಾಹನಗಳಿಗೆ ಉಚ್ಚಿಲ ಭಾಗದ ಶಾಲಾ ಮೈದಾನದಲ್ಲಿ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳೂರು ಹಾಗೂ ಉಚ್ಚಿಲ ಕಡೆಯಿಂದ ಬರುವ ವಾಹನಗಳಿಗೆ ಕಾಪು ಮಂಥನ್ ರೆಸಾರ್ಟ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಹಾಗೂ ಮೂಳೂರು ಸಾಯಿರಾಧಾ ರೆಸಾರ್ಟ್ ಸಮೀಪ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿರುವುದರಿಂದ ಸಂಚಾರ ದಟ್ಟಣೆ ತಪ್ಪಿಸಲು ಸಾರ್ವಜನಿಕರು ನಿಗದಿತ ವಾಹನ ನಿಲುಗಡೆ ಸ್ಥಳಗಳನ್ನು ಬಳಸಬೇಕು ಹಾಗೂ ಪೊಲೀಸ್ ಇಲಾಖೆ ಮತ್ತು ಸ್ವಯಂಸೇವಕರಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.