ರಸ್ತೆ ಬದಿ ಸ್ವಾಗತದ ಸಂಪ್ರದಾಯ ಕೈಬಿಡಿ: ಕಾಂಗ್ರೆಸ್ ನಾಯಕರಿಗೆ ಜಯ ಶೆಟ್ಟಿ ಮನವಿ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ನಾಯಕರು ಉತ್ಸಾಹದಿಂದ ಭಾಗವಹಿಸುವುದು ಸ್ವಾಗತಾರ್ಹ. ಆದರೆ ಖಾಸಗಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸುವ ಮಾಜಿ ಸಚಿವರು ಹಾಗೂ ಹಿರಿಯ ನಾಯಕರನ್ನು ಹೆಜಮಾಡಿ ಗಡಿಯಲ್ಲಿ ರಸ್ತೆ ಬದಿ ನಿಂತು ಸ್ವಾಗತಿಸುವ ಕ್ರಮವನ್ನು ಕೈಬಿಡಬೇಕು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಜಯ ಶೆಟ್ಟಿ ಬನ್ನಂಜೆ ಮನವಿ ಮಾಡಿದ್ದಾರೆ.
ಪಕ್ಷದ ಹುದ್ದೆಗಳನ್ನು ಅಲಂಕರಿಸಿರುವ ನಾಯಕರು ಜಿಲ್ಲೆಗೆ ಆಗಮಿಸಿದಾಗ ಮೊದಲು ಪಕ್ಷದ ಕಚೇರಿಗೆ ಭೇಟಿ ನೀಡಿದರೆ, ಅಲ್ಲಿ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸುವುದು ಸೂಕ್ತ. ಆದರೆ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬರುವಾಗ ರಸ್ತೆ ಬದಿ ಕಾರ್ಯಕರ್ತರನ್ನು ಒಗ್ಗೂಡಿಸಿ ಸ್ವಾಗತಿಸುವುದರಿಂದ ಪಕ್ಷದ ಕಾರ್ಯಕರ್ತರಿಗೆ ಮುಜುಗರ ಉಂಟಾಗುತ್ತದೆ. ಅಲ್ಲದೆ, ಸ್ಥಳೀಯ ಕಾರ್ಯಕರ್ತರಿಗೆ ನಾಯಕರನ್ನು ಸ್ವಾಗತಿಸಲು ಸೂಕ್ತ ಅವಕಾಶವೂ ಸಿಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಪು ನಗರದ ಹೃದಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮರಣಾರ್ಥ ಕಾಂಗ್ರೆಸ್ ಭವನವಿದೆ. ಪಕ್ಷದ ಚಟುವಟಿಕೆಗಳಿಗೆಂದೇ ಕಚೇರಿ ಇರುವಾಗ, ನಾಯಕರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡಿದರೆ ಕಾರ್ಯಕರ್ತರು ಅಲ್ಲಿಯೇ ಗೌರವ ಸಲ್ಲಿಸಬಹುದು. ಚುನಾವಣಾ ಸಂದರ್ಭದಲ್ಲಿ ಮಾತ್ರವಲ್ಲದೆ, ಇತರ ಸಮಯದಲ್ಲಿಯೂ ನಾಯಕರು ಪಕ್ಷದ ಕಚೇರಿಗೆ ಭೇಟಿ ನೀಡುವ ಮೂಲಕ ಕಾರ್ಯಕರ್ತರೊಂದಿಗೆ ಬೆರೆಯಬೇಕು ಎಂದು ಅವರು ತಿಳಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸುವ ಪ್ರತಿಯೊಬ್ಬ ನಾಯಕರನ್ನೂ ರಸ್ತೆ ಬದಿ ನಿಂತು ಸ್ವಾಗತಿಸಲು ಕಾರ್ಯಕರ್ತರನ್ನು ಒಗ್ಗೂಡಿಸುವ ಪದ್ಧತಿಯನ್ನು ಕೈಬಿಡಬೇಕು. ಇಂತಹ ಸ್ವಾಗತದ ಕ್ರಮದಿಂದ ಪಕ್ಷಕ್ಕೆ ಯಾವುದೇ ವಿಶೇಷ ಲಾಭವಾಗುವುದಿಲ್ಲ. ಬದಲಾಗಿ, ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಗೌರವಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಾಯಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಯ ಶೆಟ್ಟಿ ಬನ್ನಂಜೆ ಕಾಂಗ್ರೆಸ್ ನಾಯಕರಲ್ಲಿ ವಿನಂತಿಸಿದ್ದಾರೆ.