ಅ.26ರೊಳಗೆ ರಾಜಣ್ಣರನ್ನು ಮಂತ್ರಿ ಮಾಡಿ: ನ್ಯಾಯ ಸಿಗದಿದ್ದರೆ ಆಮರಣಾಂತ ಉಪವಾಸ- ಅನುಪಮಾ ಶೆಣೈ
ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ‘ವೋಟ್ ಚೋರಿ’ ವಿಚಾರದಲ್ಲಿ ಸತ್ಯ ಮಾತನಾಡಿದ್ದಕ್ಕಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಉಚ್ಚಾಟಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದು ಮಾಜಿ ಡಿವೈಎಸ್ಪಿ ಹಾಗೂ ಸಮಾಜಸೇವಕಿ ಅನುಪಮಾ ಶೆಣೈ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿ. ನಾಗೇಂದ್ರ ಅವರ ರಾಜೀನಾಮೆಯಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ಕೆ.ಎನ್. ರಾಜಣ್ಣ ಅವರನ್ನು ಅಕ್ಟೋಬರ್ 26ರ ವಾಲ್ಮೀಕಿ ಜಯಂತಿಯೊಳಗೆ ಮರುನೇಮಕ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಗಡುವು ನೀಡಿದರು. ಸರ್ಕಾರ ಈ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯ ಅಕ್ರಮಗಳು ಹಾಗೂ ವೋಟ್ ಚೋರಿ ಕುರಿತು ಧ್ವನಿ ಎತ್ತಿದ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಿರುವುದು ಅನ್ಯಾಯವಾಗಿದೆ ಎಂದು ಅನುಪಮಾ ಶೆಣೈ ಹೇಳಿದರು. ರಾಜಣ್ಣ ಅವರ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆದುಕೊಂಡ ರೀತಿಯನ್ನು ಟೀಕಿಸಿದ ಅವರು, ರಾಜಕೀಯವಾಗಿ ಪ್ರಾಮಾಣಿಕವಾಗಿ ಮಾತನಾಡುವವರನ್ನು ವ್ಯವಸ್ಥೆಯಿಂದ ದೂರವಿಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜಣ್ಣ ಅವರನ್ನು ಕಾಂಗ್ರೆಸ್ ಪಕ್ಷವು ವೋಟ್ ಚೋರಿ ವಿರುದ್ಧದ ಹೋರಾಟದ ಅಧಿಕೃತ ಲಾಂಛನವನ್ನಾಗಿ ಮಾಡಬೇಕು. ಕಾಮನ್ವೆಲ್ತ್ ಕ್ರೀಡಾಕೂಟದ ಸಂದರ್ಭದಲ್ಲಿ ‘ಶೇರಾ’ ಎಂಬ ಲಾಂಛನ ಬಳಸಿದಂತೆ, SIR ವಿಚಾರದಲ್ಲಿ ‘ರಾಯಲ್ ತುಮಕೂರು ಟೈಗರ್’ ಎಂದು ಗುರುತಿಸಿಕೊಂಡಿರುವ ರಾಜಣ್ಣ ಅವರನ್ನು ಬಳಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಚುನಾವಣಾ ನೋಂದಣಾಧಿಕಾರಿಗಳ ಮೇಲೆ ರಾಜಕೀಯ ಒತ್ತಡವಿದೆ ಎಂದು ಅನುಪಮಾ ಶೆಣೈ ಆರೋಪಿಸಿದರು. ನಕಲಿ ಮತದಾರರನ್ನು ಪತ್ತೆಹಚ್ಚಲು ಶ್ರಮಿಸುತ್ತಿರುವ ಸರ್ಕಾರಿ ನೌಕರರು ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧವೇ ರಾಜಕೀಯ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿರುವಾಗ, ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಯ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಲೂ ಕಷ್ಟ ಎಂದು ಹೇಳಿದರು.
ದೆಹಲಿಯಲ್ಲಿ SIR ಹಾಗೂ ವೋಟ್ ಚೋರಿ ವಿಚಾರವಾಗಿ ನಡೆಯುತ್ತಿರುವ ಹೋರಾಟಕ್ಕೆ ಖಾಸಗಿ ಮದ್ಯದ ಲಾಬಿಯಿಂದ ಹಣಕಾಸಿನ ನೆರವು ದೊರೆಯುತ್ತಿದೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅನುಪಮಾ ಶೆಣೈ, ಈ ಕುರಿತು ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಆಡಳಿತಾವಧಿಯ ಅಬಕಾರಿ ನೀತಿ ಹಾಗೂ ಮದ್ಯದ ಲಾಬಿಗೆ ಸಂಬಂಧಿಸಿದ ಆರೋಪಗಳನ್ನು ಉಲ್ಲೇಖಿಸಿದ ಅವರು, ಹೋರಾಟದ ಹಣಕಾಸಿನ ಮೂಲಗಳ ಕುರಿತು ಪಾರದರ್ಶಕತೆ ಇರಬೇಕು ಎಂದರು.
ಅಭಿಜಿತ್ ದಿಪ್ಕೆ ಅವರ ನೇತೃತ್ವದಲ್ಲಿ ರೂಪುಗೊಂಡಿರುವ ಸಿಜೆಪಿ ಹೋರಾಟದ ಸ್ವರೂಪವನ್ನೂ ಟೀಕಿಸಿದ ಅವರು, ಇದು ಕೇವಲ ರಾಜಕೀಯ ಹೋರಾಟವಲ್ಲ; ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡದ ಪ್ರಯತ್ನವೂ ಆಗಿರಬಹುದು ಎಂದು ಅಭಿಪ್ರಾಯಪಟ್ಟರು. ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಹಣಕಾಸಿನ ಮೂಲಗಳ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಬಾಂಗ್ಲಾದೇಶದ ಜೆನ್-ಜಿ ಚಳವಳಿಯನ್ನು ಮಾದರಿಯಾಗಿ ಪರಿಗಣಿಸುವ ಯುವ ನಾಯಕರ ನಿಲುವನ್ನು ಅನುಪಮಾ ಶೆಣೈ ಟೀಕಿಸಿದರು. ಬಾಂಗ್ಲಾದೇಶದ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಅಲ್ಲಿ ನಡೆದ ಬದಲಾವಣೆಗಳನ್ನು ಭಾರತದ ಪ್ರಜಾಪ್ರಭುತ್ವದ ಹೋರಾಟಗಳಿಗೆ ಹೋಲಿಸುವುದು ಸರಿಯಲ್ಲ ಎಂದು ಹೇಳಿದರು.
ಅಕ್ಟೋಬರ್ 26ರ ವಾಲ್ಮೀಕಿ ಜಯಂತಿಯೊಳಗೆ ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಮರುಸೇರ್ಪಡೆಗೊಳಿಸದಿದ್ದರೆ ಕರ್ನಾಟಕದಲ್ಲಿಯೂ ಸಿಜೆಪಿ ಮಾದರಿಯ ಹೋರಾಟ ಆರಂಭಿಸಲಾಗುವುದು ಎಂದು ಅನುಪಮಾ ಶೆಣೈ ಎಚ್ಚರಿಸಿದರು. ಅಗತ್ಯವಿದ್ದರೆ ಸೋನಂ ವಾಂಗ್ಚುಕ್ ಅವರ ಮಾದರಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿಯೂ ತಿಳಿಸಿದರು.
ರಾಜಣ್ಣ ಅವರಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ, ವಾಲ್ಮೀಕಿ ಜಯಂತಿಯನ್ನು ಸರ್ಕಾರದ ವಿರುದ್ಧ ಪ್ರತಿಭಟನೆಯ ದಿನವನ್ನಾಗಿ ಆಚರಿಸಬೇಕು ಎಂದು ಸಮುದಾಯದವರಿಗೆ ಕರೆ ನೀಡಿದರು. ದಾವಣಗೆರೆ ಉಪಚುನಾವಣೆಯಲ್ಲಿ ವಿವಿಧ ಸಮುದಾಯಗಳು ಒಗ್ಗೂಡಿದ ರೀತಿಯಲ್ಲಿಯೇ ಬೇಡ ಸಮುದಾಯದವರು ಪಕ್ಷಾತೀತವಾಗಿ ಒಂದಾಗಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಯುವಶಕ್ತಿ ಮತ್ತು ಸಾರ್ವಜನಿಕರು ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ ಅನುಪಮಾ ಶೆಣೈ, ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳಲ್ಲಿ ‘#ನಾನೂಗಣಪತಿ’ ಮತ್ತು ‘#ರಾಹುಲ್ ಸಂತ್ರಸ್ತರ ಸಂಘ (RSS)’ ಎಂಬ ಹ್ಯಾಷ್ಟ್ಯಾಗ್ಗಳನ್ನು ಬಳಸುವ ಮೂಲಕ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.