-->
 ಅ.21: ಉಡುಪಿಯಲ್ಲಿ ಆಭರಣ ಜುವೆಲ್ಲರ್ಸ್ ಮಳಿಗೆ ನವೀಕೃತ ರೂಪದಲ್ಲಿ ಪುನಾರಂಭ

ಅ.21: ಉಡುಪಿಯಲ್ಲಿ ಆಭರಣ ಜುವೆಲ್ಲರ್ಸ್ ಮಳಿಗೆ ನವೀಕೃತ ರೂಪದಲ್ಲಿ ಪುನಾರಂಭ


ಸುಮಾರು ಒಂಬತ್ತು ದಶಕಗಳ ಸುದೀರ್ಘ ಇತಿಹಾಸ, ನಂಬಿಕೆ ಮತ್ತು ಗ್ರಾಹಕರೊಂದಿಗಿನ ಆತ್ಮೀಯ ಬಾಂಧವ್ಯಕ್ಕೆ ಸಾಕ್ಷಿಯಾಗಿರುವ ಉಡುಪಿ ನಗರದ ಸಿಬಿ ರಸ್ತೆಯಲ್ಲಿರುವ ದಿ ಒರಿಜಿನಲ್ ಆಭರಣ ಜುವೆಲ್ಲರ್ಸ್ ನ ಮೂಲ ಮಳಿಗೆ ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಂಡಿದ್ದು, ಅಕ್ಟೋಬರ್ 21ರಂದು ಪುನಾರಂಭಗೊಳ್ಳಲಿದೆ.


1935ರಲ್ಲಿ ಉಡುಪಿಯಲ್ಲಿ ಆರಂಭಗೊಂಡ ಈ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಯ ಮೊದಲ ಮಳಿಗೆಯು ಕೇವಲ ವ್ಯಾಪಾರ ಕೇಂದ್ರವಷ್ಟೇ ಅಲ್ಲದೆ, ಸಂಸ್ಥೆಯ ಬೆಳವಣಿಗೆ, ಪರಂಪರೆ ಮತ್ತು ಗ್ರಾಹಕರ ವಿಶ್ವಾಸದ ಪ್ರತೀಕವಾಗಿಯೂ ಗುರುತಿಸಿಕೊಂಡಿದೆ. ಪ್ರಸ್ತುತ ಈ ಮಳಿಗೆ ಸಂಸ್ಥೆಯ ಪ್ರಧಾನ ಕಚೇರಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ಹಳೆಯ ವೈಭವ ಹಾಗೂ ಪರಂಪರೆಯ ಮೌಲ್ಯಗಳನ್ನು ಉಳಿಸಿಕೊಂಡು, ಗ್ರಾಹಕರಿಗೆ ಆಧುನಿಕ ಅನುಭವ ಒದಗಿಸುವ ಉದ್ದೇಶದಿಂದ ಶೋರೂಂಗೆ ಹೊಸ ರೂಪ ನೀಡಲಾಗಿದೆ.

ಉಡುಪಿಯ ಸಿಬಿ ರಸ್ತೆಯಲ್ಲಿ ಒಂದೇ ಮಳಿಗೆಯೊಂದಿಗೆ ಆರಂಭವಾದ ಆಭರಣ ಜುವೆಲ್ಲರ್ಸ್‌ನ ಪಯಣ ಇಂದು ಕರ್ನಾಟಕ ಮತ್ತು ಗೋವಾದ ವಿವಿಧ ಭಾಗಗಳಿಗೆ ವಿಸ್ತರಿಸಿದೆ. ಉಡುಪಿ ಮೂಲದ ಈ ಸಂಸ್ಥೆಯು ಪ್ರಸ್ತುತ 8 ಜಿಲ್ಲೆಗಳಲ್ಲಿ ಒಟ್ಟು 20 ಮಳಿಗೆಗಳನ್ನು ಹೊಂದಿದ್ದು, ಆಭರಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸಿದೆ. ಉಡುಪಿ, ಮಂಗಳೂರು, ಬೆಂಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಗೋವಾದ ಪಣಜಿ ಮತ್ತು ಮಡಗಾಂವ್ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಸಂಸ್ಥೆ ತನ್ನ ಸೇವೆಯನ್ನು ಒದಗಿಸುತ್ತಿದೆ. ಬೆಂಗಳೂರಿನ ಜಯನಗರದ 5ನೇ ಬ್ಲಾಕ್‌ನಲ್ಲಿಯೂ ಸಂಸ್ಥೆಯ ಮಳಿಗೆಯಿದೆ.

ಸಂಸ್ಥೆಯ ಅಧ್ಯಕ್ಷ ಮಧುಕರ್ ಕಾಮತ್ ಅವರ ದೂರದೃಷ್ಟಿ ಮತ್ತು ಮಾರ್ಗದರ್ಶನದಲ್ಲಿ ಬೆಳೆದಿರುವ ಆಭರಣ ಜುವೆಲ್ಲರ್ಸ್, ತನ್ನ ಸುದೀರ್ಘ ಪರಂಪರೆಯನ್ನು ಉಳಿಸಿಕೊಂಡೇ ಹೊಸ ಮಾರುಕಟ್ಟೆಗಳಿಗೆ ವಿಸ್ತರಿಸುತ್ತಿದೆ. ಗ್ರಾಹಕರ ವಿಶ್ವಾಸಕ್ಕೆ ಆದ್ಯತೆ ನೀಡುತ್ತಾ, ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ತನ್ನ ಸೇವೆ ಹಾಗೂ ಮಳಿಗೆಗಳ ವಿನ್ಯಾಸದಲ್ಲಿ ನವೀನತೆಯನ್ನು ಅಳವಡಿಸಿಕೊಳ್ಳುತ್ತಿದೆ.

ಸಿಬಿ ರಸ್ತೆಯ ಮೂಲ ಮಳಿಗೆಯ ನವೀಕರಣದ ಕುರಿತು ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಸ್ ಎಂ. ಕಾಮತ್, “ಸಿಬಿ ರಸ್ತೆಯ ಮಳಿಗೆಯೇ ನಮ್ಮ ಸಂಸ್ಥೆಯ ಬೆಳವಣಿಗೆಯ ಪಯಣಕ್ಕೆ ನಾಂದಿ ಹಾಡಿದ ಸ್ಥಳ. ಈ ಮಳಿಗೆ ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆಯೇ ನಮ್ಮ ಪ್ರತಿಯೊಂದು ಮಳಿಗೆಯೂ ವಿಸ್ತರಿಸಿದೆ. ಗ್ರಾಹಕರಿಗೆ ನವೀಕೃತ ವಾತಾವರಣದಲ್ಲಿ ಇನ್ನಷ್ಟು ಉತ್ತಮ ಸೇವೆ ನೀಡುವ ಉದ್ದೇಶದಿಂದ ಈ ಶೋರೂಂ ಅನ್ನು ಆಕರ್ಷಕವಾಗಿ ನವೀಕರಿಸಲಾಗಿದೆ” ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಮಹೇಶ್ ಎಂ. ಕಾಮತ್ ಮಾತನಾಡಿ, “ನಮ್ಮ ಸಂಸ್ಥೆಯ ಮೂಲ ಮೌಲ್ಯಗಳು ಮತ್ತು ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಗ್ರಾಹಕರಿಗೆ ಸೇವೆ ನೀಡುವುದು ನಮ್ಮ ಆದ್ಯತೆ. ಮಧುಕರ್ ಕಾಮತ್ ಅವರ ದೂರದೃಷ್ಟಿ ಇಂದಿಗೂ ನಮ್ಮ ಕಾರ್ಯಚಟುವಟಿಕೆಗಳಿಗೆ ಮಾರ್ಗದರ್ಶನವಾಗಿದೆ. ನವೀಕೃತ ಸಿಬಿ ರಸ್ತೆ ಮಳಿಗೆಯು ನಮ್ಮ ಭವ್ಯ ಪರಂಪರೆ ಮತ್ತು ಭವಿಷ್ಯದ ಬೆಳವಣಿಗೆಯ ಆಶಯಗಳ ನಡುವಿನ ಕೊಂಡಿಯಾಗಿದೆ” ಎಂದರು.

90 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಆಭರಣ ಜುವೆಲ್ಲರ್ಸ್, ನ್ಯಾಯಯುತ ಬೆಲೆಯ ಭರವಸೆ, ನೈತಿಕ ವ್ಯವಹಾರ, ಅತ್ಯುತ್ತಮ ಕರಕುಶಲತೆ ಮತ್ತು ಗುಣಮಟ್ಟದ ಭರವಸೆ ಎಂಬ ನಾಲ್ಕು ಪ್ರಮುಖ ಮೌಲ್ಯಗಳನ್ನು ತನ್ನ ವ್ಯವಹಾರದ ಅಡಿಪಾಯವಾಗಿಸಿಕೊಂಡಿದೆ. ಈ ಮೌಲ್ಯಗಳ ಮೂಲಕ ಗ್ರಾಹಕರೊಂದಿಗೆ ದೀರ್ಘಕಾಲದ ಬಾಂಧವ್ಯವನ್ನು ಬೆಳೆಸಿಕೊಂಡಿರುವ ಸಂಸ್ಥೆ, ಪರಂಪರೆಯ ಘನತೆಯೊಂದಿಗೆ ಆಧುನಿಕತೆಯತ್ತ ಹೆಜ್ಜೆ ಇಡುತ್ತಿದೆ.

ನವೀಕೃತ ಮೂಲ ಮಳಿಗೆಯ ಪುನಾರಂಭವು ಆಭರಣ ಜುವೆಲ್ಲರ್ಸ್‌ನ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದ್ದು, ಉಡುಪಿಯೊಂದಿಗೆ ಸಂಸ್ಥೆ ಹೊಂದಿರುವ ಅವಿನಾಭಾವ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ.

Ads on article

Advertise in articles 1

advertising articles 2

Advertise under the article