ಫಾರ್ಮ್-7 ಮೂಲಕ ಯಾರ ಹೆಸರೂ ಡಿಲೀಟ್ ಮಾಡಿಲ್ಲ: ಚುನಾವಣಾಧಿಕಾರಿ ಅನ್ಬುಕುಮಾರ್ ಸ್ಪಷ್ಟನೆ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲು ನಮೂನೆ 7 ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪಕ್ಕೆ ಬೆಂಗಳೂರಿನಲ್ಲಿಂದು ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ಮತದಾರರ ಹೆಸರನ್ನ ಡಿಲೀಟ್ ಮಾಡುವಂತೆ ಅಕ್ಷೇಪಣೆ ಸಲ್ಲಿಕೆ ಮಾಡಿದ್ರೆ, ತಕ್ಷಣ ಡಿಲೀಟ್ ಮಾಡುವುದಿಲ್ಲ. ಮೊದಲು ಸಂಬಂಧಪಟ್ಟ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ. ಈವರೆಗೆ 91,278 ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಇದರಿಂದ ಯಾವುದೇ ಮತದಾರರ ಹೆಸರನ್ನು ಡಿಲೀಟ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ರಾಜ್ಯದಲ್ಲಿ 43,82,313 ಜನರ ಪೈಕಿ 43,55,818 ಜನರಿಗೆ ನೋಟಿಸ್ ನೀಡಲಾಗಿದೆ. ಇನ್ನೂ 26,495 ನೋಟಿಸ್ ಬಾಕಿಯಿದ್ದು, 36,89,063 ನೋಟಿಸ್ ವಿಚಾರಣೆ ಪೂರ್ಣಗೊಂಡಿದೆ. 6,66,755 ನೋಟಿಸ್ ವಿಚಾರಣೆ ಬಾಕಿಯಿದೆ. ಬಿಎಲ್‌ಓಗಳು ಮನೆಮನೆಗೆ ಹೋಗುತ್ತಿದ್ದು, ಈ ತಿಂಗಳ 12ರ ಒಳಗೆ ವಿಚಾರಣೆ ಪೂರ್ಣಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 9,10,732- ಫಾರ್ಮ್ – 6 ಬಂದಿದೆ. 91,278 – ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿವೆ. ಸೆಪ್ಟೆಂಬರ್ 23ರ ವರೆಗೆ 58,220 ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದ್ರೆ ಅ.4ರ ವರೆಗೆ 91,278 – ಫಾರ್ಮ್ -7 ಅರ್ಜಿ ಸಲ್ಲಿಕೆಯಾಗಿವೆ. ಅ.27 ರಂದು ಅಂತಿಮ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.