-->
ಹಸಿರಾಗಬೇಕಿದ್ದ ಗದ್ದೆಗಳಿಗೆ ಬಿರು ಬಿಸಿಲ ಬರೆ: ಬೆಳೆ ಉಳಿಸಲು ಟ್ಯಾಂಕರ್ ನೀರಿಗೆ ರೈತರ ಮೊರೆ

ಹಸಿರಾಗಬೇಕಿದ್ದ ಗದ್ದೆಗಳಿಗೆ ಬಿರು ಬಿಸಿಲ ಬರೆ: ಬೆಳೆ ಉಳಿಸಲು ಟ್ಯಾಂಕರ್ ನೀರಿಗೆ ರೈತರ ಮೊರೆ


ಹಸಿರು ಹೊದಿಕೆಯಂತೆ ಕಂಗೊಳಿಸಬೇಕಿದ್ದ ಕರಾವಳಿಯ ಭತ್ತದ ಗದ್ದೆಗಳು ಈ ಬಾರಿ ಬಿಸಿಲಿನ ಬೇಗೆಗೆ ಬಣ್ಣ ಕಳೆದುಕೊಳ್ಳುತ್ತಿವೆ. ಆಗಸ್ಟ್– ಸೆಪ್ಟೆಂಬರ್‌ನಲ್ಲಿ ನೀರಿನಿಂದ ತುಂಬಿರಬೇಕಾದ ಗದ್ದೆಗಳಲ್ಲಿ ಒಣ ಮಣ್ಣಿನ ಬಿರುಕುಗಳು ಕಾಣಿಸಿಕೊಂಡಿದ್ದು, ತೆನೆ ಬಂದು ಕಾಳು ಕಟ್ಟುವ ನಿರ್ಣಾಯಕ ಹಂತದಲ್ಲೇ ನೀರಿನ ಕೊರತೆ ಎದುರಾಗಿದೆ. ಪರಿಣಾಮ, ರೈತರ ಕಣ್ಣೆದುರೇ ಭತ್ತದ ಪೈರು ಬಾಡುತ್ತಿರುವ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬೆಳೆ ಉಳಿಸಲು ಅನಿವಾರ್ಯವಾಗಿ ಭತ್ತದ ಬೆಳೆಗಾರರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. 


ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಸುಮಾರು ಶೇ.29ರಷ್ಟು ಮಳೆ ಕೊರತೆಯಾಗಿರುವುದು ಕೃಷಿಯ ಮೇಲೆ ನೇರ ಪರಿಣಾಮ ಬೀರಿದೆ. ಮಳೆಯ ಕೊರತೆಯ ಜತೆಗೆ ಉಷ್ಣತೆ ಹೆಚ್ಚಾಗಿರುವುದರಿಂದ ಗದ್ದೆಗಳಲ್ಲಿ ತೇವಾಂಶವೂ ಕಡಿಮೆಯಾಗಿದ್ದು, ಹಲವು ಕಡೆ ಭತ್ತದ ಪೈರುಗಳು ಹಳದಿ ಬಣ್ಣಕ್ಕೆ ತಿರುಗಿವೆ.


ಭತ್ತದ ಬೆಳೆಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ಅತ್ಯಂತ ಮಹತ್ವದ ಅವಧಿ. ಪೈರು ಸಮೃದ್ಧವಾಗಿ ಬೆಳೆದು ತೆನೆ ಹೊರಬಂದು ಕಾಳು ಕಟ್ಟುವ ಈ ಹಂತದಲ್ಲಿ ಗದ್ದೆಯಲ್ಲಿ ಸಾಕಷ್ಟು ನೀರು ಇರಬೇಕಾಗುತ್ತದೆ. ಆದರೆ ಈ ಬಾರಿ ಹಲವು ಗದ್ದೆಗಳಲ್ಲಿ ನೀರು ನಿಲ್ಲುವುದಿರಲಿ, ಮಣ್ಣಿನಲ್ಲಿಯೇ ತೇವಾಂಶ ಉಳಿದಿಲ್ಲ. ಪರಿಣಾಮವಾಗಿ ಪೈರುಗಳು ಬಿಸಿಲಿನ ತಾಪಕ್ಕೆ ಬಾಡುತ್ತಿದ್ದು, ಕೆಲವು ಕಡೆ ಒಣಗಿ ಹೋಗುವ ಸ್ಥಿತಿಗೆ ತಲುಪಿವೆ.


ಕರಾವಳಿಯ ಭತ್ತದ ಕೃಷಿಗೆ ಆಟಿ ತಿಂಗಳ ಮಳೆಯೂ ಪ್ರಮುಖ ಆಸರೆಯಾಗಿತ್ತು. ನಿರಂತರ ಮಳೆಯಿಂದ ಭೂಮಿಯಲ್ಲಿ ತೇವಾಂಶ ಉಳಿಯುವುದರ ಜತೆಗೆ ಬಾವಿ, ಕೊಳವೆಬಾವಿಗಳಲ್ಲಿ ನೀರಿನ ಮಟ್ಟವೂ ಹೆಚ್ಚುತ್ತಿತ್ತು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಗದ್ದೆಗಳು ಒಣಗಿದ್ದು, ಅಂತರ್ಜಲ ಮಟ್ಟವೂ ಕುಸಿದಿದೆ.

ಬಾವಿ ಹಾಗೂ ಕೊಳವೆಬಾವಿಗಳಿಂದ ನೀರು ಪಂಪ್ ಮಾಡಿ ಬೆಳೆ ಉಳಿಸಿಕೊಳ್ಳಲು ರೈತರು ಪ್ರಯತ್ನಿಸುತ್ತಿದ್ದರೂ ಎಲ್ಲ ಗದ್ದೆಗಳಿಗೂ ನೀರು ಪೂರೈಸುವುದು ಸಾಧ್ಯವಾಗುತ್ತಿಲ್ಲ. ಕೆಲವು ಕಡೆ ನೀರಿನ ಮಟ್ಟ ಕೆಳಕ್ಕೆ ಕುಸಿದಿರುವುದರಿಂದ ಪಂಪ್‌ಗಳಿಗೂ ನೀರು ಸಿಗದ ಪರಿಸ್ಥಿತಿ ಎದುರಾಗಿದೆ. 

ಆದಿ ಉಡುಪಿಯ ಭತ್ತದ ಬೆಳೆಗಾರ ಸುರೇಶ್ ಸುವರ್ಣ ಅವರ ಗದ್ದೆಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೈರು ತೆನೆ ಕಟ್ಟುವ ಸಮಯದಲ್ಲಿ ನೀರಿನ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಬೆಳೆ ಉಳಿಸಿಕೊಳ್ಳಲು ಅವರು ಟ್ಯಾಂಕರ್ ಮೂಲಕ ನೀರು ತರಿಸಿ ಗದ್ದೆಗೆ ಹರಿಸಿದ್ದಾರೆ. ಇದಕ್ಕಾಗಿ ಸುಮಾರು 6 ಸಾವಿರ ರೂ. ವೆಚ್ಚ ಮಾಡಲಾಗಿದೆ. ಇದರ ಜೊತೆಗೆ ಮನೆಯ ಬಾವಿಯಿಂದಲೂ ನೀರನ್ನು ಗದ್ದೆಗಳಿಗೆ ಪಂಪ್ ಮಾಡಿ ಬೆಳೆ ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ.

ಸುರೇಶ್ ಸುವರ್ಣ ಅವರ ಮನೆ ಸಮೀಪದ ಗದ್ದೆಗಳೀಗೆ ನೀರಿನ ವ್ಯವಸ್ಥೆ ಮಾಡಿರುವ ಕಾರಣ ಸಂಪೂರ್ಣವಾಗಿ ಒಣಗದೆ ಉಳಿದಿವೆ. ಆದರೆ ಮನೆಯಿಂದ ದೂರದಲ್ಲಿರುವ ಗದ್ದೆಗಳಿಗೆ ನೀರು ಪೂರೈಸಲು ಸಾಧ್ಯವಾಗದ ಕಾರಣ ಅವುಗಳಲ್ಲಿ ಪೈರು ಒಣಗುವ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಕೊರತೆಯಿಂದ ತೆನೆಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರಿದ್ದು, ಈ ಬಾರಿ ನಿರೀಕ್ಷಿಸಿದ ಪ್ರಮಾಣದಲ್ಲಿ ಇಳುವರಿ ಬರುವುದು ಕಷ್ಟ ಎಂಬ ಆತಂಕವನ್ನು ಸುರೇಶ್ ಸುವರ್ಣ ವ್ಯಕ್ತಪಡಿಸಿದ್ದಾರೆ.

ನೀರಿನ ಕೊರತೆಯಿಂದ ಕರಾವಳಿಯ ಹಲವು ಪ್ರದೇಶಗಳಲ್ಲಿ ರೈತರು ಬಿತ್ತನೆ ಹಾಗೂ ನಾಟಿ ಕಾರ್ಯವನ್ನೇ ಕೈಬಿಟ್ಟಿದ್ದಾರೆ. ಉಡುಪಿಯ ಆದಿ ಉಡುಪಿ, ಕಡೆಕಾರು, ಕಾರ್ಕಳ, ಹೆಬ್ರಿ ಸೇರಿದಂತೆ ದಕ್ಷಿಣ ಕನ್ನಡದ ಬೆಳ್ತಂಗಡಿ ಹಾಗೂ ಇತರ ಪ್ರದೇಶಗಳಲ್ಲೂ ಮಳೆ ಕೊರತೆಯ ಪರಿಣಾಮ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

ಕರಾವಳಿಯಲ್ಲಿ ಭತ್ತದ ಕೃಷಿ ವಿಸ್ತೀರ್ಣವೂ ವಾಡಿಕೆಗಿಂತ ಸುಮಾರು ಶೇ.40ರಿಂದ 50ರಷ್ಟು ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಬೆಳೆ ಬೆಳೆಯಲು ನೀರಿಲ್ಲದಿರುವುದು ಒಂದೆಡೆಯಾದರೆ, ನೀರಾವರಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಗದ್ದೆಗಳು ಮತ್ತೊಂದೆಡೆ. ಹೀಗಾಗಿ ‘ಬೆಳೆ ಬೆಳೆದರೂ ಉಳಿಸಿಕೊಳ್ಳಲು ಸಾಧ್ಯವೇ?’ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಭತ್ತದಲ್ಲಿ ತೆನೆ ಬಂದು ಕಾಳು ಕಟ್ಟುವ ಹಂತ ಅತ್ಯಂತ ನಿರ್ಣಾಯಕ. ಈ ಸಂದರ್ಭದಲ್ಲಿ ನೀರಿನ ಕೊರತೆಯಾದರೆ ತೆನೆಗಳ ಬೆಳವಣಿಗೆ ಹಾಗೂ ಕಾಳು ತುಂಬುವಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ನೀರಿನ ಕೊರತೆಯ ಜತೆಗೆ ಹೆಚ್ಚಿನ ಉಷ್ಣತೆ ಮುಂದುವರಿದರೆ ಕಾಳುಗಳು ಪೂರ್ಣವಾಗಿ ತುಂಬದೆ ಇಳುವರಿ ಕುಂಠಿತವಾಗುವ ಆತಂಕವೂ ಇದೆ. ಹೀಗಾಗಿ ಈ ಬಾರಿಯ ಸಮಸ್ಯೆ ಕೇವಲ ಬೆಳೆ ಪ್ರಮಾಣಕ್ಕೆ ಸೀಮಿತವಾಗದೆ, ಕಾಳಿನ ಗುಣಮಟ್ಟ ಮತ್ತು ಒಟ್ಟಾರೆ ಇಳುವರಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ತೇವಾಂಶದ ಕೊರತೆ, ಅಸಹಜ ಉಷ್ಣತೆ ಹಾಗೂ ಹವಾಮಾನದಲ್ಲಿನ ದಿಢೀರ್ ಬದಲಾವಣೆಗಳು ಭತ್ತದ ಬೆಳೆಗೆ ಮತ್ತಷ್ಟು ಸವಾಲು ತಂದೊಡ್ಡಬಹುದು. ದುರ್ಬಲಗೊಂಡಿರುವ ಪೈರಿಗೆ ರೋಗ–ಕೀಟಬಾಧೆ ಕಾಣಿಸಿಕೊಂಡರೆ ರೈತರ ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ರೈತರು ಪೈರಿನ ಬಣ್ಣ, ಬೆಳವಣಿಗೆ, ಎಲೆಗಳ ಸ್ಥಿತಿ ಹಾಗೂ ಕೀಟಬಾಧೆಯನ್ನು ನಿರಂತರವಾಗಿ ಗಮನಿಸುವ ಅಗತ್ಯವಿದೆ.

ಕರಾವಳಿ ಎಂದರೆ ಮಳೆಯ ಪ್ರದೇಶ ಎಂಬ ನಂಬಿಕೆಯೇ ಇಲ್ಲಿನ ಕೃಷಿಯ ಜೀವಾಳವಾಗಿತ್ತು. ಆದರೆ ಮಳೆಗಾಲದಲ್ಲಿಯೇ ಮಳೆ ಕೊರತೆ, ಅಸಹಜ ಉಷ್ಣತೆ ಹಾಗೂ ಅಂತರ್ಜಲ ಕುಸಿತದಂತಹ ಬೆಳವಣಿಗೆಗಳು ಈ ನಂಬಿಕೆಗೆ ಸವಾಲು ಹಾಕುತ್ತಿವೆ. ಈ ಬಾರಿ ಕರಾವಳಿಯ ಭತ್ತದ ಗದ್ದೆಗಳಲ್ಲಿ ಕಾಣಿಸುತ್ತಿರುವ ಒಣಗಿದ ಪೈರುಗಳು ಕೇವಲ ಒಂದು ಹಂಗಾಮಿನ ಸಮಸ್ಯೆಯಲ್ಲ. ಮಳೆ ಯಾವಾಗ ಬರುತ್ತದೆ, ಎಷ್ಟು ಬರುತ್ತದೆ ಎಂಬ ಅನಿಶ್ಚಿತತೆಯ ನಡುವೆ ಕರಾವಳಿಯ ಸಾಂಪ್ರದಾಯಿಕ ಭತ್ತದ ಕೃಷಿಯನ್ನು ಮುಂದಿನ ದಿನಗಳಲ್ಲಿ ಹೇಗೆ ಉಳಿಸಿಕೊಳ್ಳಬೇಕು ಎಂಬ ಗಂಭೀರ ಪ್ರಶ್ನೆಯನ್ನೂ ಇದು ಮುಂದಿಟ್ಟಿದೆ. 

Ads on article

Advertise in articles 1

advertising articles 2

Advertise under the article