-->
 ಸೈಬರ್ ಅಪರಾಧ ತಡೆಗೆ ಜಾಗೃತಿ: ಮಣಿಪಾಲದಲ್ಲಿ ಪೊಲೀಸ್ ಸೈಕಲ್ ಜಾಥಾಕ್ಕೆ ಚಾಲನೆ

ಸೈಬರ್ ಅಪರಾಧ ತಡೆಗೆ ಜಾಗೃತಿ: ಮಣಿಪಾಲದಲ್ಲಿ ಪೊಲೀಸ್ ಸೈಕಲ್ ಜಾಥಾಕ್ಕೆ ಚಾಲನೆ


ಸೈಬರ್ ಅಪರಾಧಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಮಣಿಪಾಲದಲ್ಲಿ ಸೈಕಲ್ ಜಾಥಾ ಆಯೋಜಿಸಲಾಯಿತು.


ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಸುಧಾಕರ್ ನಾಯ್ಕ್ ಅವರು ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಅಮಾಯಕರು ವಿವಿಧ ರೀತಿಯ ಆನ್‌ಲೈನ್ ವಂಚನೆಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧಗಳು ಹೇಗೆ ನಡೆಯುತ್ತವೆ ಹಾಗೂ ಅವುಗಳಿಂದ ಸುರಕ್ಷಿತವಾಗಿರುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು. ಪೊಲೀಸರು ಕೈಗೊಳ್ಳುತ್ತಿರುವ ಜಾಗೃತಿ ಕಾರ್ಯಗಳಿಗೆ ಸಾರ್ವಜನಿಕರೂ ಸಹಕರಿಸಬೇಕು. ಯಾವುದೇ ಅನುಮಾನಾಸ್ಪದ ಕರೆ, ಸಂದೇಶ ಅಥವಾ ಆನ್‌ಲೈನ್ ವ್ಯವಹಾರಗಳ ಬಗ್ಗೆ ಎಚ್ಚರಿಕೆ ವಹಿಸುವ ಮೂಲಕ ಸೈಬರ್ ವಂಚನೆಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಮಣಿಪಾಲ ಠಾಣೆ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾತನಾಡಿ, ಮೊಬೈಲ್ ಫೋನ್‌ಗಳ ಬಳಕೆಯಲ್ಲಿ ಅನುಕೂಲಕ್ಕಿಂತ ದುರುಪಯೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಅತ್ಯಗತ್ಯವಾಗಿದೆ. ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಆಕ್ಸೆಸ್‌ಗಳನ್ನು ಗೌಪ್ಯವಾಗಿಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಮನೆ, ಕುಟುಂಬ ಹಾಗೂ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಜಾಲತಾಣಗಳ ಅತಿಯಾದ ಹಾಗೂ ಅಸುರಕ್ಷಿತ ಬಳಕೆಯಿಂದ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಡಿಜಿಟಲ್ ಸುರಕ್ಷತೆಯ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಬೇಕು ಎಂದರು.


ಈ ಸಂದರ್ಭದಲ್ಲಿ ಉಡುಪಿ ಸೆನ್ ಠಾಣೆ ಇನ್‌ಸ್ಪೆಕ್ಟರ್ ನೀಲೇಶ್ ಚೌಹಾಣ್, ಸೆನ್ ಠಾಣೆ ಪಿಎಸ್ಐ ಸುದರ್ಶನ್ ದೊಡ್ಮನಿ, ಉಡುಪಿ ನಗರ ಠಾಣೆ ಪಿಎಸ್ಐ ಭರತೇಶ್ ಕಂಕಣವಾಡಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಮಣಿಪಾಲದಿಂದ ಆರಂಭವಾದ ಸೈಕಲ್ ಜಾಥಾವು ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಉಡುಪಿ ಬೋರ್ಡ್ ಹೈಸ್ಕೂಲ್ ಬಳಿ ಸಮಾಪನಗೊಂಡಿತು.

Ads on article

Advertise in articles 1

advertising articles 2

Advertise under the article