-->
ವಿಜಯದಶಮಿಯಂದು ಕೃಷ್ಣನ ಸನ್ನಿಧಿಯಲ್ಲಿ ಸಾಂಪ್ರದಾಯಿಕ ತೆನೆ ಪೂಜೆ

ವಿಜಯದಶಮಿಯಂದು ಕೃಷ್ಣನ ಸನ್ನಿಧಿಯಲ್ಲಿ ಸಾಂಪ್ರದಾಯಿಕ ತೆನೆ ಪೂಜೆ


ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ತೆನೆಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಕೃಷಿ ಸಂಸ್ಕೃತಿ, ಪ್ರಕೃತಿಯ ಆರಾಧನೆ ಹಾಗೂ ತುಳುನಾಡಿನ ಧಾರ್ಮಿಕ ಪರಂಪರೆಯ ಪ್ರತೀಕವಾಗಿರುವ ಭತ್ತದ ತೆನೆಗೆ ಪೂಜೆ ಸಲ್ಲಿಸಿ, ಶ್ರೀಕೃಷ್ಣನಿಗೆ ಸಮರ್ಪಿಸುವ ಮೂಲಕ ನಾಡಿನ ಸಮೃದ್ಧಿ ಮತ್ತು ಸುಭಿಕ್ಷಕ್ಕಾಗಿ ಪ್ರಾರ್ಥಿಸಲಾಯಿತು.


ವಿಜಯದಶಮಿಯಂದು ನಡೆಯುವ ತೆನೆಪೂಜೆಗೆ ತನ್ನದೇ ಆದ ಧಾರ್ಮಿಕ ಮಹತ್ವವಿದೆ. ಪರಂಪರೆಯಂತೆ ಭತ್ತದ ತೆನೆಯನ್ನು ಸೋದೆ ಮಠದ ಮುಂಭಾಗದಲ್ಲಿ ವಿಧಿವಿಧಾನಗಳೊಂದಿಗೆ ಪೂಜಿಸಲಾಯಿತು. ಬಳಿಕ ಪೂಜಿತ ತೆನೆಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಇರಿಸಿ, ಮಂಗಳವಾದ್ಯಗಳ ನಿನಾದದೊಂದಿಗೆ ರಥಬೀದಿಯಲ್ಲಿ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಶ್ರೀಕೃಷ್ಣ ಮಠಕ್ಕೆ ತರಲಾಯಿತು.


ಶ್ರೀಕೃಷ್ಣ ಮಠದ ತೆನೆಪೂಜೆಯ ವಿಶೇಷತೆಗಳಲ್ಲಿ ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಕೃಷ್ಣ ಗರ್ಭಗೃಹದ ಪೂರ್ವದ ಬಾಗಿಲು ಪ್ರಮುಖವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಬಾಗಿಲನ್ನು ತೆರೆದು ಭತ್ತದ ತೆನೆಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು. ಶ್ರೀಕೃಷ್ಣನಿಗೆ ಸಮರ್ಪಿಸಿದ ಬಳಿಕ ಮುಂಭಾಗದ ಲಕ್ಷ್ಮೀ ಮಂಟಪದಲ್ಲಿ ಉಡುಪಿಯ ಅಷ್ಟಮಠಗಳು ಹಾಗೂ ಇತರ ಉಪಮಠಗಳಿಗೆ ತೆನೆಯನ್ನು ವಿತರಿಸಲಾಯಿತು. ನಂತರ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ತೆನೆಯನ್ನು ಬಡಗುಮಾಳಿಗೆಗೆ ತರಲಾಯಿತು. ಅಲ್ಲಿ ಭಕ್ತರಿಗೆ ತೆನೆ ವಿತರಿಸಲಾಯಿತು.

ಭತ್ತದ ತೆನೆ ಸಮೃದ್ಧಿ, ಸುಭಿಕ್ಷ ಹಾಗೂ ಅನ್ನದ ಮಹತ್ವವನ್ನು ಸಾರುವ ಸಂಕೇತವಾಗಿದೆ. ಕೃಷಿ ಪ್ರಧಾನ ಬದುಕಿನೊಂದಿಗೆ ಬೆಸೆದುಕೊಂಡಿರುವ ಈ ಆಚರಣೆ, ಪ್ರಕೃತಿ ಮತ್ತು ಅನ್ನದಾತನಿಗೆ ಕೃತಜ್ಞತೆ ಸಲ್ಲಿಸುವ ಭಾರತೀಯ ಸಂಸ್ಕೃತಿಯ ಸೊಗಡನ್ನು ಪ್ರತಿಬಿಂಬಿಸುತ್ತದೆ. ವಿಜಯದಶಮಿಯ ಶುಭದಿನದಂದು ಶ್ರೀಕೃಷ್ಣನಿಗೆ ತೆನೆ ಸಮರ್ಪಿಸುವ ಮೂಲಕ ತಲೆಮಾರುಗಳಿಂದ ನಡೆದುಬಂದಿರುವ ಧಾರ್ಮಿಕ ಪರಂಪರೆಯನ್ನು ಭಕ್ತಿಯಿಂದ ಮುಂದುವರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಪಾರುಪತ್ಯೆದಾರ ಶ್ರೀಶ ಭಟ್ ಕಡೆಕಾರು, ಶ್ರೀಮಠದ ಪ್ರಮುಖರು, ಸಿಬ್ಬಂದಿ ಹಾಗೂ ಭಕ್ತರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article