-->
ಸಮಾಜದ ಶಾಂತಿ, ನೆಮ್ಮದಿಗಾಗಿ ಪೊಲೀಸರ ತ್ಯಾಗ ಶ್ಲಾಘನೀಯ: ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್

ಸಮಾಜದ ಶಾಂತಿ, ನೆಮ್ಮದಿಗಾಗಿ ಪೊಲೀಸರ ತ್ಯಾಗ ಶ್ಲಾಘನೀಯ: ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್


ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ಕರ್ತವ್ಯ ನಿರ್ವಹಿಸುವ ವೇಳೆ ಸಮಾಜದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಹುತಾತ್ಮರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಹೇಳಿದರು.


ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಕೇಂದ್ರಸ್ಥಾನದಲ್ಲಿ ಆಯೋಜಿಸಲಾದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಪೊಲೀಸರು ಸಮಾಜದ ಭದ್ರತೆ ಹಾಗೂ ಸುರಕ್ಷತೆಗಾಗಿ ತಮ್ಮ ಜೀವವನ್ನೇ ಪಣಕ್ಕಿಡುತ್ತಾರೆ. ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುವುದರೊಂದಿಗೆ ಜನರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ನೆರವಿಗೆ ಧಾವಿಸುತ್ತಾರೆ. ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುವಂತೆ ಮಾಡಲು ಪೊಲೀಸರು ಸಲ್ಲಿಸುವ ಸೇವೆ, ತ್ಯಾಗ ಹಾಗೂ ಬಲಿದಾನವನ್ನು ಸದಾ ಸ್ಮರಿಸಬೇಕು ಎಂದು ಅವರು ಹೇಳಿದರು. ಕರ್ತವ್ಯ ನಿರ್ವಹಣೆಯ ವೇಳೆ ಹುತಾತ್ಮರಾದ ಎಲ್ಲ ಪೊಲೀಸ್ ಸಿಬ್ಬಂದಿಗೆ ಗೌರವಪೂರ್ವಕ ನಮನ ಸಲ್ಲಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, 1959ರ ಅಕ್ಟೋಬರ್ 21ರಂದು ಲಡಾಖ್ ಸಮೀಪ ಚೀನಾದ ಸೈನಿಕರು ನಡೆಸಿದ ದಾಳಿಯನ್ನು ಧೈರ್ಯದಿಂದ ಎದುರಿಸಿದ ಸಿಆರ್‌ಪಿಎಫ್‌ನ 10 ಮಂದಿ ಪೊಲೀಸರು ವೀರಮರಣವನ್ನಪ್ಪಿದ್ದರು. ಒಂಬತ್ತು ಮಂದಿ ಪೊಲೀಸರು ಗಾಯಗೊಂಡು ಶತ್ರುಗಳ ವಶಕ್ಕೆ ಸಿಲುಕಿದ್ದರು. ಈ ಘಟನೆಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ವಾದ್ಯವೃಂದದವರು 'Abide With Me' ಗೀತೆಯನ್ನು ನುಡಿಸಿದರು. ಬಳಿಕ ಮೂರು ಸುತ್ತು ಕುಶಾಲತೋಪು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಪೊಲೀಸ್ ಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಿ ಹುತಾತ್ಮರನ್ನು ಸ್ಮರಿಸಲಾಯಿತು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯ್ಕ್, ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article