ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಉಡುಪಿ ಜಿಲ್ಲೆಯ ಮೂವರು ಸಾಧಕರಿಗೆ ಗೌರವ
2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆಯ ಮೂವರು ಸಾಧಕರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನ್ಯಾಯಾಂಗ ಮತ್ತು ಕಾನೂನು ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಜಿ ಚಂದ್ರಶೇಖರ್ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಹಿರಿಯ ಭಾಗವತ ಹೆರಂಜಾಲು ಗೋಪಾಲ ಗಾಣಿಗ ಅವರಿಗೆ ಪ್ರಶಸ್ತಿ ಲಭಿಸಿದೆ.
ಬಿ.ವಿ. ಆಚಾರ್ಯ:
ಉಡುಪಿ ತಾಲೂಕಿನ ಬೆಳಪು ಗ್ರಾಮದಲ್ಲಿ 1933ರ ಡಿಸೆಂಬರ್ 20ರಂದು ಜನಿಸಿದ ಬಿ.ವಿ. ಆಚಾರ್ಯ ಅವರು, ಕನ್ನಡ ಪಂಡಿತರಾಗಿದ್ದ ರಾಮಚಂದ್ರ ಆಚಾರ್ಯ ಮತ್ತು ರತ್ನಮ್ಮ ದಂಪತಿಯ ಪುತ್ರ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು, ಮದ್ರಾಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿದರು. 1957ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡ ಅವರು ಮಂಗಳೂರಿನಲ್ಲಿ ವೃತ್ತಿ ಆರಂಭಿಸಿ, ಬಳಿಕ ಬೆಂಗಳೂರಿಗೆ ತೆರಳಿ ಕರ್ನಾಟಕ ಹೈಕೋರ್ಟ್ನಲ್ಲಿ ಸೇವೆ ಮುಂದುವರಿಸಿದರು.
ಸಿವಿಲ್, ಕ್ರಿಮಿನಲ್ ಹಾಗೂ ಸಾಂವಿಧಾನಿಕ ಕಾನೂನು ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಅವರು, ಕರ್ನಾಟಕದ ಅಡ್ವೊಕೇಟ್ ಜನರಲ್ ಆಗಿ ಐದು ಬಾರಿ ಸೇವೆ ಸಲ್ಲಿಸಿದ ಅಪರೂಪದ ಸಾಧನೆ ಮಾಡಿದ್ದಾರೆ. 1989ರಲ್ಲಿ ಮೊದಲ ಬಾರಿಗೆ ಈ ಹುದ್ದೆ ಅಲಂಕರಿಸಿದ ಅವರು, ವಿವಿಧ ಅವಧಿಗಳಲ್ಲಿ ರಾಜ್ಯದ ಪರವಾಗಿ ಸುಪ್ರೀಂ ಕೋರ್ಟ್ ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿ ಮಹತ್ವದ ಪ್ರಕರಣಗಳನ್ನು ಸಮರ್ಥವಾಗಿ ಮಂಡಿಸಿದ್ದಾರೆ.
ಕಾವೇರಿ ಜಲವಿವಾದ ನ್ಯಾಯಮಂಡಳಿಯ ಮುಂದೆ ರಾಜ್ಯವನ್ನು ಪ್ರತಿನಿಧಿಸಿದ್ದ ಅವರು, ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ, 19ನೇ ಕಾನೂನು ಆಯೋಗದ ಸದಸ್ಯರಾಗಿ ಹಾಗೂ ಕರ್ನಾಟಕ ಬ್ಯಾಂಕ್ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಾನೂನು ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಮಂಗಳೂರು ವಿಶ್ವವಿದ್ಯಾಲಯವು 2009ರಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. 'ಆಲ್ ಫ್ರಮ್ ಮೆಮೊರಿ' ಎಂಬ ಆತ್ಮಕಥನವನ್ನೂ ಪ್ರಕಟಿಸಿರುವ ಅವರು, ಹಲವು ಪ್ರತಿಷ್ಠಿತ ಪ್ರಶಸ್ತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದಾರೆ.
ಡಾ. ಜಿ.ಎಸ್ ಚಂದ್ರಶೇಖರ್ :
ಹಿರಿಯ ವೈದ್ಯರು ಹಾಗೂ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಜಿ.ಎಸ್. ಚಂದ್ರಶೇಖರ್ ಅವರು ವೈದ್ಯಕೀಯ ಸೇವೆ, ಶಿಕ್ಷಣ ಮತ್ತು ಸಮಾಜಸೇವೆಯ ಮೂಲಕ ಸಮಾಜದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಬೆಳೆದ ಅವರು, ಸರ್ಕಾರಿ ಬಳ್ಳಾರಿ ವೈದ್ಯಕೀಯ ಕಾಲೇಜಿನಲ್ಲಿ MBBS ಹಾಗೂ ಸರ್ಕಾರಿ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ MD (Internal Medicine) ಪದವಿ ಪಡೆದಿದ್ದಾರೆ. 1991ರಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿದ ಅವರು, ಸುಮಾರು 15 ವರ್ಷಗಳ ಕಾಲ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.
2005ರಲ್ಲಿ ಉಡುಪಿಯಲ್ಲಿ 60 ಹಾಸಿಗೆಗಳ ಆದರ್ಶ ಆಸ್ಪತ್ರೆಯನ್ನು ಸ್ಥಾಪಿಸಿದ ಅವರು, ಅದನ್ನು ಇಂದು 200 ಹಾಸಿಗೆಗಳ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬೆಳೆಸಿದ್ದಾರೆ. ಗುಣಮಟ್ಟದ ಹಾಗೂ ಕೈಗೆಟುಕುವ ಆರೋಗ್ಯ ಸೇವೆ ಒದಗಿಸುವುದು ಆಸ್ಪತ್ರೆಯ ಪ್ರಮುಖ ಉದ್ದೇಶವಾಗಿದೆ.
ಆದರ್ಶ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರು ಹಾಗೂ ಸ್ಥಾಪಕರಾಗಿರುವ ಅವರು, ನರ್ಸಿಂಗ್, ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಪ್ಯಾರಾಮೆಡಿಕಲ್ ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡುತ್ತಿದ್ದಾರೆ. ವೈದ್ಯಕೀಯ ಸಮ್ಮೇಳನಗಳಲ್ಲಿ ಉಪನ್ಯಾಸ, ವೈಜ್ಞಾನಿಕ ಅಧಿವೇಶನಗಳ ಅಧ್ಯಕ್ಷತೆ, ವೈದ್ಯಕೀಯ ಲೇಖನಗಳ ಪ್ರಕಟಣೆ ಹಾಗೂ CME ಕಾರ್ಯಕ್ರಮಗಳ ಆಯೋಜನೆಯ ಮೂಲಕ ವೈದ್ಯಕೀಯ ಕ್ಷೇತ್ರದ ಜ್ಞಾನವರ್ಧನೆಗೂ ಶ್ರಮಿಸುತ್ತಿದ್ದಾರೆ.
ಹೆರಂಜಾಲು ಗೋಪಾಲ ಗಾಣಿಗ:
ಕುಂದಾಪುರ ತಾಲೂಕಿನ ನಾಗೂರು ಸಮೀಪದ ಹೆರಂಜಾಲಿನಲ್ಲಿ 1963ರ ಮಾರ್ಚ್ 28ರಂದು ವೆಂಕಟರಮಣ ಗಾಣಿಗ ಮತ್ತು ಗಣಪು ದಂಪತಿಯ ಪುತ್ರನಾಗಿ ಜನಿಸಿದ ಹೆರಂಜಾಲು ಗೋಪಾಲ ಗಾಣಿಗ ಅವರು ಬಾಲ್ಯದಿಂದಲೇ ಯಕ್ಷಗಾನದ ವಾತಾವರಣದಲ್ಲಿ ಬೆಳೆದವರು. ಯಕ್ಷಗಾನ ಪರಂಪರೆಯ ವೇಷಧಾರಿಯಾಗಿದ್ದ ತಂದೆಯೇ ಅವರಿಗೆ ಕಲೆಯ ಮೊದಲ ಗುರು ಹಾಗೂ ಪ್ರೇರಣಾಶಕ್ತಿಯಾಗಿದ್ದರು.
ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನೀಲಾವರ ರಾಮಕೃಷ್ಣಯ್ಯನವರಿಂದ ಭಾಗವತಿಕೆ, ಮಹಾಬಲ ಕಾರಂತರಿಂದ ಮದ್ದಳೆಗಾರಿಕೆ ಹಾಗೂ ತಂದೆಯವರಿಂದ ಹೆಜ್ಜೆಗಾರಿಕೆ ಅಭ್ಯಾಸ ಮಾಡಿದ ಅವರು, 15ನೇ ವಯಸ್ಸಿನಲ್ಲೇ ವೃತ್ತಿರಂಗ ಪ್ರವೇಶಿಸಿದರು.
ಮಾರಣಕಟ್ಟೆ, ಕಮಲಶಿಲೆ, ಮಂದಾರ್ತಿ, ಅಮೃತೇಶ್ವರಿ, ಸಾಲಿಗ್ರಾಮ ಹಾಗೂ ಶಿರಸಿ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಂದಾರ್ತಿ ಮೇಳದ ಪ್ರಧಾನ ಭಾಗವತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಭಿಮನ್ಯು, ಬಬ್ರುವಾಹನ, ಪ್ರಹ್ಲಾದ, ಷಣ್ಮುಖ, ಶ್ರೀಕೃಷ್ಣ ಹಾಗೂ ವೃಷಸೇನ ಮೊದಲಾದ ಪಾತ್ರಗಳನ್ನು ನಿರ್ವಹಿಸಿ ಜನಮನ್ನಣೆ ಗಳಿಸಿರುವ ಅವರು, ಹಿಮ್ಮೇಳ ಮತ್ತು ಮುಮ್ಮೇಳ ಎರಡರಲ್ಲೂ ಪರಿಣತಿ ಹೊಂದಿದ್ದಾರೆ. ಅಪಾರ ಪ್ರಸಂಗಜ್ಞಾನ, ಕವಿತಾಶಕ್ತಿ ಹಾಗೂ ರಂಗವನ್ನು ಉತ್ಸಾಹದಿಂದ ಮುನ್ನಡೆಸುವ ವಿಶಿಷ್ಟ ಭಾಗವತಿಕೆಯ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪತ್ನಿ ಸಾವಿತ್ರಿ ಹಾಗೂ ಪುತ್ರಿಯರಾದ ರಮ್ಯ ಮತ್ತು ಪಲ್ಲವಿ ಅವರ ಕುಟುಂಬ. ಹಲವು ಸಂಘ-ಸಂಸ್ಥೆಗಳು ಇವರ ಕಲಾಸೇವೆಯನ್ನು ಗುರುತಿಸಿ ಗೌರವಿಸಿವೆ.