ಅಕ್ರಮ ಕೊಜೆ ಮಣ್ಣು ಸಾಗಾಟ ಟಿಪ್ಪರ್ ಅಪಘಾತ ಪ್ರಕರಣ: ಮೂವರ ಬಂಧನ
ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ರಾಜ್ಯ ಹೆದ್ದಾರಿಯಲ್ಲಿ ಅಕ್ರಮವಾಗಿ ಕೋಜೆ ಮಣ್ಣು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಗಳು ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಟಿಪ್ಪರ್ ಚಾಲಕರಾದ ನಾಗರಾಜ, ರತ್ವೀಜ್ ಹಾಗೂ ಕೋಜೆ ಮಣ್ಣು ತೆಗೆದ ಸ್ಥಳದ ಮಾಲೀಕ ಅಜಿತ್ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅ.30ರಂದು ಬೆಳಿಗ್ಗೆ 8.45ರ ಸುಮಾರಿಗೆ ಕುಂದಾಪುರ ಕಡೆಯಿಂದ ಎರಡು ಟಿಪ್ಪರ್‌ಗಳು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದವು. ಈ ವೇಳೆ ಎದುರಿನಿಂದ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿರುವುದನ್ನು ಗಮನಿಸಿದ ಟಿಪ್ಪರ್ ಚಾಲಕ ವಾಹನದ ವೇಗ ಕಡಿಮೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಇನ್ನೊಂದು ಟಿಪ್ಪರ್ ಚಾಲಕ ಅತಿವೇಗದಿಂದ ಬಂದು ಮುಂದಿನ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗಕ್ಕೆ ಚಲಿಸಿದ ಟಿಪ್ಪರ್, ಕಂಡ್ಲೂರಿನಿಂದ ಬಸ್ರೂರು ಕಡೆಗೆ ತೆರಳುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.
ಸ್ಕೂಟರ್‌ನಲ್ಲಿದ್ದ ಟಿ.ಕೆ. ಮೊಹಮ್ಮದ್ ಶಯಾನ್ ಹಾಗೂ ಮೊಹಮ್ಮದ್ ರಯಾನ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತಕ್ಕೆ ಕಾರಣವಾದ ಟಿಪ್ಪರ್‌ನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕೋಜೆ ಮಣ್ಣನ್ನು ತುಂಬಿಕೊಂಡು ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಪ್ಪರ್ ಗಳನ್ನು ವಶಕ್ಕೆ ಪಡೆದು ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.