-->
ಉಡುಪಿ ಧರ್ಮಪ್ರಾಂತ್ಯದ ಮೂವರು ಉಪಯಾಜಕರಿಗೆ ಗುರುದೀಕ್ಷೆ ಪದವಿ ಪ್ರದಾನ

ಉಡುಪಿ ಧರ್ಮಪ್ರಾಂತ್ಯದ ಮೂವರು ಉಪಯಾಜಕರಿಗೆ ಗುರುದೀಕ್ಷೆ ಪದವಿ ಪ್ರದಾನ

 


ಉಡುಪಿ ಧರ್ಮಪ್ರಾಂತದ ಮೂವರು ಉಪ ಯಾಜಕರಿಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಬುಧವಾರ ಗುರು ದೀಕ್ಷೆಯನ್ನು ಪ್ರದಾನಿಸಲಾಯಿತು.

ಪಡುಕೋಣೆಯ ಕೆವಿನ್ ಡಿಸೋಜಾ, ನಿಡ್ಪಳ್ಳಿಯ ಸ್ವೀವನ್ ಡಿಸೋಜಾ ಹಾಗೂ ಕೆಮ್ಮಣ್ಣುವಿನ ಶೊನ್ ಸಾವಿಯೋ ಅಂದ್ರಾದೆ ಇವರುಗಳಿಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ನೂತನ ಧರ್ಮಗುರುಗಳಾಗಿ ಅಭಿಷಿಕ್ತಗೊಳಿಸಿದರು.

ಸಂಭ್ರಮದ ಬಲಿಪೂಜೆಯಲ್ಲಿ ಪವಿತ್ರಾತ್ಮನ ಆಗಮನಕ್ಕಾಗಿ ಧರ್ಮಾಧ್ಯಕ್ಷರ ಜೊತೆ ಸೇರಿದ ಎಲ್ಲಾ ಧರ್ಮಗುರುಗಳೂ ತಮ್ಮ ಕರಗಳನ್ನು ನವ ಧರ್ಮಗುರುಗಳ ಅಭ್ಯರ್ಥಿಯ ಶಿರದ ಮೇಲಿಟ್ಟು ಪ್ರಾರ್ಥಿಸಿದರು. ನಂತರ ಕ್ರೈಸ್ತ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನವ ಧರ್ಮಗುರುಗಳ ಕರಗಳನ್ನು ಪವಿತ್ರ ತೈಲಗಳಿಂದ ಅಭಿಷಿಕ್ತಗೊಳಿಸಿದರು.

ತಮ್ಮ ಸಂದೇಶದಲ್ಲಿ ಬಿಷಪ್ ಲೆಸ್ಲಿ ಡಿಸೋಜಾ ಮಾತನಾಡಿ ದೇವಜನರ ಸೇವೆಗಾಗಿ ದೇವರ ಎದುರು ನಮ್ಮನ್ನು ನಾವು ವಿನಮ್ರ ಗೊಳಿಸು ವುದೇ ನೈಜ ನಾಯಕತ್ವ. ಕ್ರೈಸ್ತ ಧರ್ಮಗುರುವಿನ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ವಿವರಿಸಿದರು. ಧರ್ಮಪ್ರಾಂತಕ್ಕೆ ಹೊಸ ಧರ್ಮಗುರುವನ್ನು ನೀಡಿದ ಕುಟುಂಬ ವರ್ಗವನ್ನು ಶ್ಲಾಘಿಸಿದರು. ಕ್ರೈಸ್ತ ಕುಟುಂಬಗಳಿಂದ ಹೆಚ್ಚಿನ ಯುವಕರು ಧರ್ಮಗುರುಗಳಾಗಲು ಮುಂದೆ ಬರುವಂತೆ ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸಲು ಪೋಷಕರಿಗೆ ಕರೆ ನೀಡಿದರು. ಎಂದರು.

ನೂತನವಾಗಿ ದೀಕ್ಷೆ ಪಡೆದ ಉಪಯಾಜಕರು ಪ್ರಥಮ ಬಾರಿಗೆ ಬಲಿಪೀಠದ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಭಕ್ತಾದಿಗಳಿಗೆ ದಿವ್ಯ ಪ್ರಸಾದವನ್ನು ವಿತರಿಸಿದರು.

ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಎಫ್ ಲೂವಿಸ್, ಕುಲಪತಿ ವಂ|ಸ್ಟೀವನ್ ಡಿಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ, ಶಿರ್ವ, ಕಾರ್ಕಳ, ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ವಂ|ಚಾರ್ಲ್ಸ್ ಮಿನೇಜಸ್, ವಂ|ಆಲ್ಬನ್ ಡಿಸೋಜಾ, ವಂ|ಪಾವ್ಲ್ ರೇಗೊ, ಮಂಗಳೂರು ಗುರುಮಠದ ರೆಕ್ಟರ್ ವಂ|ರಾಜೇಶ್ ರೊಸಾರಿಯೊ ವಿವಿಧ ಚರ್ಚುಗಳ ಧರ್ಮಗುರುಗಳು ಉಪಸ್ಥಿತರಿದ್ದರು. 

ಗುರುದೀಕ್ಷೆಯ ಪವಿತ್ರ ಬಲಿಪೂಜೆಯ ಬಳಿಕ ನೂತನ ಧರ್ಮಗುರುಗಳಿಗೆ ಧರ್ಮಪ್ರಾಂತ್ಯದ ಪರವಾಗಿ ಅಭಿನಂದಿಸಲಾಯಿತು.  

ವಂ|ವಿಲ್ಸನ್ ಡಿಸೋಜಾ ಗುರು ದೀಕ್ಷೆಯ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಕ್ರಮ ನಿರೂಪಿಸಿದರು. ವಂ|ಸ್ಟೀಫನ್ ರೊಡ್ರಿಗಸ್ ನೂತನ ಧರ್ಮಗುರುಗಳ ಪರಿಚಯ ಮಾಡಿದರು. ವಂ|ಸ್ಟೀವನ್ ಡಿಸೋಜಾ ವಂದಿಸಿದರು

ನೂತನ ಧರ್ಮಗುರುಗಳ ಪರಿಚಯ

ಕೆವಿನ್ ಡಿಸೋಜಾ ಅವರು ಕುಂದಾಪುರದ ಪಡುಕೋಣೆ ಧರ್ಮಕೇಂದ್ರಕ್ಕೆ ಸೇರಿದವರಾಗಿದ್ದು, 1995 ರ ಜನವರಿ 17 ರಂದು ಜನಿಸಿದ್ದು ಇವರ ತಂದೆ ಕ್ಲೋಡಿಯಸ್ ಡಿಸೋಜಾ ನಿವೃತ್ತ ಕೃಷಿಕರಾಗಿದ್ದು, ತಾಯಿ ಜೀಟಾ ಡಿಸೋಜಾ ಗೃಹಿಣಿಯಾಗಿದ್ದಾರೆ.

ಮೂರು ಮಕ್ಕಳಲ್ಲಿ ಕೆವಿನ್ ಅವರು ಕಿರಿಯರಾಗಿದ್ದು, ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ಪಡುಕೋಣೆಯಲ್ಲೇ ವಿದ್ಯಾಭ್ಯಾಸ ಮಾಡಿದ ಅವರು, ಬಳಿಕ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ವಾಣಿಜ್ಯ ಪದವಿ (ಬಿ.ಕಾಂ.) ಪೂರ್ಣಗೊಳಿಸಿದರು.

ಪಿಯುಸಿ ಶಿಕ್ಷಣದ ಬಳಿಕ ಅವರು ಉಡುಪಿ ಧರ್ಮಪ್ರಾಂತ್ಯದ ಸೆಮಿನರಿಗೆ ಸೇರ್ಪಡೆಗೊಂಡರು. 2018ರ ಜೂನ್ನಲ್ಲಿ ಮೇಜರ್ ಸೆಮಿನರಿ ಶಿಕ್ಷಣವನ್ನು ಆರಂಭಿಸಿದರು. ಉಡುಪಿಯ ಮೂಡುಬೆಳ್ಳೆಯ ದಿವ್ಯಧಾಮ ಮೈನರ್ ಸೆಮಿನರಿಯಲ್ಲಿ ರೀಜೆನ್ಸಿ ಸೇವೆ ಸಲ್ಲಿಸಿದರು.

ಧರ್ಮಶಾಸ್ತ್ರ ಅಧ್ಯಯನದ ಸಂದರ್ಭದಲ್ಲಿ ಮೊದಲ ವರ್ಷ ಉಡುಪಿಯಲ್ಲಿ, ಎರಡನೇ ವರ್ಷ ತೊಟ್ಟಂನಲ್ಲಿ ಹಾಗೂ ಮೂರನೇ ವರ್ಷ ಹಿರ್ಗಾನದಲ್ಲಿ ಭಾನುವಾರದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಪ್ರಿ-ಡಯಕೋನೇಟ್ ಸೇವೆಯನ್ನು ಮೂಡುಬೆಳ್ಳೆಯಲ್ಲಿ ಸಲ್ಲಿಸಿದ ಅವರು, ಡಿಕನ್ ಸೇವೆಯ ಸಂದರ್ಭದಲ್ಲಿ ಉದ್ಯಾವರ ಹಾಗೂ ಬಿಷಪ್ ಹೌಸ್ನಲ್ಲಿ ಸೇವೆ ಸಲ್ಲಿಸಿದ್ದರು.

ಸ್ಟೀವನ್ ಡಿಸೋಜಾ ಅವರು ನಿಡ್ಪಳ್ಳಿಯ ರೊಸಾರಿ ಮಾತೆ ಚರ್ಚ್ನ ಬಾಲ್ತಜಾರ್ ಡಿಸೋಜಾ ಹಾಗೂ ತಾಯಿ ಸ್ಟೆಲ್ಲಾ ಡಿಸೋಜಾ ಪುತ್ರರಾಗಿದ್ದು 1997ರ ಜೂನ್ 22ರಂದು ಜನಿಸಿದರು.  

ತಮ್ಮ ಊರಿನ ಸಮೀಪದ ಸಜಂಕಾಡಿ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಶಿಕ್ಷಣ ಪಡೆದ ಅವರು, ಬಳಿಕ ಮಂಗಳೂರಿನ ರೊಸಾರಿಯೋ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು. ನಂತರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಮಾಜಕಾರ್ಯ ಪದವಿ (ಬಿ.ಎಸ್.ಡಬ್ಲ್ಯು.) ಪಡೆದರು.

ಎಸ್ಎಸ್ಎಲ್ಸಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ 2013ರ ಮೇ 27ರಂದು ಮೈನರ್ ಸೆಮಿನರಿಗೆ ಸೇರ್ಪಡೆಗೊಂಡರು. 2018ರ ಜೂನ್ 10ರಂದು ಮೇಜರ್ ಸೆಮಿನರಿ ಶಿಕ್ಷಣ ಆರಂಭಿಸಿದರು. ರೀಜೆನ್ಸಿ ಅವಧಿಯಲ್ಲಿ ಬೈಂದೂರಿನ ಹೋಲಿ ಕ್ರಾಸ್ ಚರ್ಚ್ನಲ್ಲಿ ಸೇವೆ ಸಲ್ಲಿಸಿದರು.

ಧರ್ಮಶಾಸ್ತ್ರ ಅಧ್ಯಯನದ ಸಂದರ್ಭದಲ್ಲಿ ಮೊದಲ ವರ್ಷದ ಭಾನುವಾರದ ಸೇವೆಯನ್ನು ಕಣಜಾರಿನಲ್ಲಿ, ಎರಡನೇ ವರ್ಷದ ಸೇವೆಯನ್ನು ಉಡುಪಿಯಲ್ಲಿ ಹಾಗೂ ಮೂರನೇ ವರ್ಷದ ಸೇವೆಯನ್ನು ಅತ್ತೂರಿನಲ್ಲಿ ಸಲ್ಲಿಸಿದರು. ಪ್ರಿ-ಡಯಕೋನೇಟ್ ಸೇವೆಯನ್ನು ಉದ್ಯಾವರದಲ್ಲಿ ನಿರ್ವಹಿಸಿದ್ದರು.

 ಶೊನ್ ಸಾವಿಯೋ ಅಂದ್ರಾದೆ ಅವರು ಕೆಮ್ಮಣ್ಣುವಿನ ಸಂತ ತೆರೇಸಾ — ಲಿಟಲ್ ಫ್ಲವರ್ ಆಫ್ ಜೀಸಸ್ ಚರ್ಚಿನ ರೊನಾಲ್ಡ್ ಆಂಟನಿ ಹಾಗೂ ಮ್ಯಾಕ್ಸಿ ಜಸಿಂತಾ ಅಂದ್ರಾದೆ ಅವರ ಇಬ್ಬರು ಮಕ್ಕಳಲ್ಲಿ ಕಿರಿಯವರು. ಅವರು 1989ರ ಆಗಸ್ಟ್ 20ರಂದು ಜನಿಸಿದರು.  

ಕಲ್ಯಾಣಪುರದ ಮಿಲಾಗ್ರಿಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಶಿಕ್ಷಣ ಪಡೆದರು. ಬಳಿಕ ಮಂಗಳೂರಿನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿ, ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಬಿಬಿಎಂ ಪದವಿ ಹಾಗೂ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ (ಎಂಎಸ್ಡಬ್ಲ್ಯು.) ಪಡೆದರು.

ವೃತ್ತಿಜೀವನದಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಯುನಿಸೆಫ್ (UNICEF) ಯೋಜನೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು. ಬಳಿಕ ಕೋಲ್ಕತ್ತಾದ ಅಸೋಸಿಯೇಷನ್ ಆಫ್ ಬೆಂಗಾಲ್ ಕೊಲ್ಯಾಬರೇಟರ್ಸ್ ಫಾರ್ ಡೆವಲಪ್ಮೆಂಟ್ (ABCD) ಸಂಸ್ಥೆಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದರು. ನಂತರ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಆರು ತಿಂಗಳು ಸೇವೆ ಸಲ್ಲಿಸಿದರು.

2018ರಲ್ಲಿ ಧಾರ್ಮಿಕ ಶಿಕ್ಷಣಕ್ಕಾಗಿ ಸೆಮಿನರಿಗೆ ಸೇರ್ಪಡೆಗೊಂಡರು. ರೀಜೆನ್ಸಿ ಅವಧಿಯಲ್ಲಿ ಬೆಲ್ಮನ್ನ ಸಂತ ಜೋಸೆಫ್ ಚರ್ಚ್ನಲ್ಲಿ ಸೇವೆ ಸಲ್ಲಿಸಿದರು.

ಧರ್ಮಶಾಸ್ತ್ರ ಅಧ್ಯಯನದ ಸಂದರ್ಭದಲ್ಲಿ ಮೊದಲ ವರ್ಷದ ಸೇವೆಯನ್ನು ಅತ್ತೂರಿನಲ್ಲಿ, ಎರಡನೇ ವರ್ಷದ ಸೇವೆಯನ್ನು ಹಿರ್ಗಾನದಲ್ಲಿ ಹಾಗೂ ಮೂರನೇ ವರ್ಷದ ಸೇವೆಯನ್ನು ಉಡುಪಿಯಲ್ಲಿ ಸಲ್ಲಿಸಿದರು. ಪ್ರಿ-ಡಯಕೋನೇಟ್ ಸೇವೆಯನ್ನು ಶಂಕರಪುರದಲ್ಲಿ ನಿರ್ವಹಿಸಿದರು.

Ads on article

Advertise in articles 1

advertising articles 2

Advertise under the article