ವೈದ್ಯ–ರೋಗಿ ಸಂಬಂಧದ ಪಾವಿತ್ರ್ಯತೆ ಕಾಪಾಡುವುದು ವೈದ್ಯರ ಹೊಣೆ: ಡಾ. ಪುಷ್ಪ ಜಿ.ಕಿಣಿ
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಉಡುಪಿ-ಕರಾವಳಿಯ ನೂತನ ತಂಡದ ಪದಗ್ರಹಣ ಸಮಾರಂಭವು ಉಡುಪಿ ಟೌನ್ ಹಾಲ್‌ನಲ್ಲಿ ನಡೆಯಿತು. ಮಕ್ಕಳ ತಜ್ಞ ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಅವರ ನೇತೃತ್ವದ ನೂತನ ತಂಡಕ್ಕೆ ಖ್ಯಾತ ಮಕ್ಕಳ ತಜ್ಞೆ ಡಾ. ನಳಿನಿ ಭಾಸ್ಕರ್ ಪದಗ್ರಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ನಳಿನಿ ಭಾಸ್ಕರಾನಂದ ಕುಮಾರ್, ಜೀವನ ಚಕ್ರದಲ್ಲಿ ತಾವು ಬೆಳೆಸಿದ ಕಿರಿಯ ವೈದ್ಯರು ಹಾಗೂ ವಿದ್ಯಾರ್ಥಿಗಳು ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿರುವುದನ್ನು ಕಂಡು ಸಂತಸವಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಪೀಳಿಗೆ ಜವಾಬ್ದಾರಿಯುತವಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಪುಷ್ಪ ಜಿ ಕಿಣಿ, ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧ ಅತ್ಯಂತ ಪವಿತ್ರವಾದದ್ದು. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ವ್ಯಾಪಾರೀಕರಣದ ನಡುವೆಯೂ ವೈದ್ಯರು ಮಾನವೀಯತೆಯನ್ನು ಮರೆಯಬಾರದು. ವೈದ್ಯರು ತಮ್ಮ ಕೈಗಳ ಸ್ಪರ್ಶದಿಂದಲೂ, ಮಾತುಗಳ ಮೂಲಕವೂ ರೋಗಿಯನ್ನು ಪರೀಕ್ಷಿಸುವುದು ಹಾಗೂ ಆತ್ಮವಿಶ್ವಾಸ ತುಂಬುವುದು ಚಿಕಿತ್ಸೆಯ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.
ಡಾ. ಉಮೇಶ್ ಪುತ್ರನ್, ವೈದ್ಯರ ಒಗ್ಗಟ್ಟಿನ ಮಹತ್ವವನ್ನು ವಿವರಿಸಿದರು. ವೈದ್ಯರ ಮೇಲೆ ನಡೆಯುವ ಹಲ್ಲೆ ಸೇರಿದಂತೆ ವೈದ್ಯಕೀಯ ಕ್ಷೇತ್ರ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಣಾಮಕಾರಿ ಕಾನೂನು ರಚನೆ ಹಾಗೂ ವೈದ್ಯರ ಹಿತಾಸಕ್ತಿಗಳ ರಕ್ಷಣೆಗೆ ಸಂಘಟನೆಯ ಒಗ್ಗಟ್ಟು ಅತ್ಯಗತ್ಯವಾಗಿದೆ ಎಂದರು.
ನೂತನ ಅಧ್ಯಕ್ಷ ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಮಾತನಾಡಿ, ಸ್ಥಳೀಯ ವೈದ್ಯರು ಹಾಗೂ ಅವರ ರೋಗಿಗಳ ಹಿತದೃಷ್ಟಿಯಿಂದ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೆಎಂಸಿಯಲ್ಲಿ ಹಾಗೂ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಸ್ಥಳೀಯ ವೈದ್ಯರು ಪ್ರವೇಶಿಸುವ ಸಂದರ್ಭದಲ್ಲಿ ಎದುರಾಗುವ ವಿಳಂಬ ಮತ್ತು ತೊಂದರೆಗಳನ್ನು ನಿವಾರಿಸಲು ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ವೈದ್ಯರಿಗೆ ಗೌರವಯುತ ಪ್ರವೇಶಕ್ಕೆ ಅನುಕೂಲವಾಗುವ ‘ಗೌರವ ಪ್ರವೇಶ ಪತ್ರ’ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಐಎಂಎ ಉಡುಪಿ-ಕರಾವಳಿಯ ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಗತ ಸಾಲಿನ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಕಾಮತ್, ಕಾರ್ಯದರ್ಶಿ ಡಾ. ಮಾನಸ್ ಈ.ಆರ್., ಕೋಶಾಧಿಕಾರಿ ಡಾ. ಸನತ್, ನೂತನ ಕಾರ್ಯದರ್ಶಿ ಡಾ. ವಿಜಯ ವೈ.ಬಿ., ಹಾಗೂ ಕೋಶಾಧಿಕಾರಿ ಡಾ. ಕಿರಣ್ ಕುಮಾರ್ ಎಂ. ಉಪಸ್ಥಿತರಿದ್ದರು.ಡಾ ಪ್ರವೀಣ್ ಶಾಸ್ತ್ರಿ , ಡಾ.ಕಸ್ತೂರಿ ನಾಯಕ್ ನಿರೂಪಿಸಿದರು. ನೂತನ ಕಾರ್ಯದರ್ಶಿ ಡಾ. ವಿಜಯ ವೈ.ಬಿ., ವಂದಿಸಿದರು.