-->
 ನ.5: ರೈತರ ಭೂಹಕ್ಕು, ಕಸ್ತೂರಿ ರಂಗನ್ ವರದಿ, ಕಾಡುಪ್ರಾಣಿ ಹಾವಳಿ ಕುರಿತು ವಿಚಾರ ಸಂಕಿರಣ

ನ.5: ರೈತರ ಭೂಹಕ್ಕು, ಕಸ್ತೂರಿ ರಂಗನ್ ವರದಿ, ಕಾಡುಪ್ರಾಣಿ ಹಾವಳಿ ಕುರಿತು ವಿಚಾರ ಸಂಕಿರಣ


ರೈತರ ಭೂಮಿಗೆ ಸಂಬಂಧಿಸಿದ ಶಾಸನಬದ್ಧ ಹಕ್ಕುಗಳಾದ ಕುಮ್ಮಿ ಹಾಗೂ ಗೇರು ಲೀಸ್ ಭೂಮಿ, ಕಸ್ತೂರಿ ರಂಗನ್ ವರದಿ ಮತ್ತು ಕಾಡುಪ್ರಾಣಿ ಹಾವಳಿ ಸಮಸ್ಯೆಗಳ ಕುರಿತು ಚರ್ಚಿಸಲು ನವೆಂಬರ್ 5ರಂದು ಉಡುಪಿಯಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳ ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಲಿರುವ ಈ ವಿಚಾರ ಸಂಕಿರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ತಮ್ಮ ಸಮಸ್ಯೆ ಹಾಗೂ ಹಕ್ಕುಗಳ ಕುರಿತು ಧ್ವನಿ ಎತ್ತುವಂತೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾ ಕೃಷಿಕ ಸಮಾಜ ಹಾಗೂ ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಹಕಾರ ಸಂಘದ ಜಂಟಿ ಸಹಯೋಗದಲ್ಲಿ ನ.5ರಂದು ಬೆಳಿಗ್ಗೆ 10.30ಕ್ಕೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹಾಗೂ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭಾಗವಹಿಸಲಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳಿಂದ ಕರಾವಳಿ ಭಾಗದ ಕೃಷಿಕರು ಹಾಗೂ ಸ್ಥಳೀಯ ಜನಜೀವನದ ಮೇಲೆ  ಪರಿಣಾಮ ಬೀರಿದೆ, ಪಶ್ಚಿಮ ಘಟ್ಟ ಪ್ರದೇಶದ ಭೌತಿಕ ಪರಿಶೀಲನೆ ನಡೆಸದೆ, ಕೃಷಿ ಭೂಮಿಗಳನ್ನೂ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸಿರುವುದರಿಂದ ರೈತರು ತಲೆತಲಾಂತರಗಳಿಂದ ಅನುಭವಿಸಿಕೊಂಡು ಬಂದಿರುವ ಭೂಮಿಯ ಹಕ್ಕುಗಳಿಗೆ ಧಕ್ಕೆಯಾಗುವ ಆತಂಕವಿದೆ. ಆದ್ದರಿಂದ ಖಾಸಗಿ ಕೃಷಿ ಭೂಮಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ಹೊರಗಿಡಬೇಕು ಹಾಗೂ ಹಿಂದಿನ ಅಧಿಸೂಚನೆಗಳನ್ನು ಮರುಪರಿಶೀಲಿಸಿ ಹೊಸ ಅಧಿಸೂಚನೆ ಹೊರಡಿಸಬೇಕು ಎಂಬುದು ಕೃಷಿಕ ಸಮಾಜದ ಪ್ರಮುಖ ಆಗ್ರಹವಾಗಿದೆ ಎಂದರು. 

ಕುಮ್ಮಿ ಹಾಗೂ ಗೇರು ಲೀಸ್ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆಯೂ ಸಭೆಯಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದರು.

ಕರಾವಳಿಯ ಮೂರು ಜಿಲ್ಲೆಗಳ ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಲಿರುವ ಈ ವಿಚಾರ ಸಂಕಿರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ತಮ್ಮ ಸಮಸ್ಯೆ ಹಾಗೂ ಹಕ್ಕುಗಳ ಕುರಿತು ಧ್ವನಿ ಎತ್ತುವಂತೆ ಮನವಿ ಮಾಡಿದರು.

ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಂಘದ ಉಪಾಧ್ಯಕ್ಷ, ಕೃಷಿಕ ವಿಠಲ್ ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ಕೃಷಿಗೆ ನಿರಂತರವಾಗಿ ಹಾನಿಯಾಗುತ್ತಿದೆ, ಹೀಗಾಗಿ ಕೃಷಿಕರು ಕೃಷಿ ಮಾಡುವುದನ್ನೇ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಕ ಬೆಳೆದ ಬೆಳೆಗಳೆಲ್ಲಾ ಕಾಡುಪ್ರಾಣಿಗಳ ಪಾಲಾಗುತ್ತಿದ್ದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಾಡುಪ್ರಾಣಿಗಳ ಉಪಟಳದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು. 

ಸುದ್ದಿಗೋಷ್ಟಿಯಲ್ಲಿ ಕೃಷಿ ಸಂಘಟನೆಗಳ ಪ್ರಮುಖರಾದ ಡಾ. ಅತುಲ್ ಕುಮಾರ್ ಶೆಟ್ಟಿ ಚಿತ್ತೂರು, ಪ್ರದೀಪ್ ಹೆಬ್ಬಾರ್, ಉಪೇಂದ್ರ ನಾಯಕ್, ವೈಕುಂಠ ಹೇರಳೆ ಮೊದಲಾದವರು ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article