ಪ್ರದೀಪ್ ಪೂಜಾರಿ ಮೇಲಿನ ಹಲ್ಲೆ ಪ್ರಕರಣ: FIR ದಾಖಲಿಸದ ಪೊಲೀಸರ ಮೇಲೆ ಕ್ರಮಕ್ಕೆ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ
Tuesday, November 03, 2026
ಹಿರಿಯಡ್ಕದ ಪ್ರದೀಪ್ ಪೂಜಾರಿ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿರುವುದು ತಪ್ಪು. ಈ ಕರ್ತವ್ಯ ಲೋಪದ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಗೆ ಒತ್ತಾಯಿಸಿರುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನೊಂದವರಿಗೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ. ಘಟನೆ ನಡೆದ ದಿನವೇ ಹಿರಿಯಡ್ಕದಲ್ಲಿರುವ ಪ್ರದೀಪ್ ಪೂಜಾರಿ ಅವರ ಮನೆಗೆ ಭೇಟಿ ನೀಡಿ, ತಾಯಿ, ಸಹೋದರ ಹಾಗೂ ಕುಟುಂಬದ ಸದಸ್ಯರು ಮತ್ತು ಬಂಧುಗಳನ್ನು ಸಂತೈಸಿದ್ದೆ. ಅಲ್ಲಿಂದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿ, ಪ್ರದೀಪ್ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೆ ಎಂದು ಅವರು ಹೇಳಿದರು.
ಹಲ್ಲೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿರುವ ಪೊಲೀಸರ ನಡೆ ಸರಿಯಲ್ಲ. ಇಂತಹ ಕರ್ತವ್ಯ ಲೋಪಗಳಿಗೆ ಸಂಬಂಧಿಸಿದಂತೆ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.