ಒಳಚರಂಡಿ ಕಾಮಗಾರಿಯಿಂದ ಹದಗೆಟ್ಟ ಚಿಟ್ಪಾಡಿ ರಸ್ತೆ: ತಕ್ಷಣ ಡಾಮರೀಕರಣಕ್ಕೆ ಶಾಸಕ ಯಶ್ಪಾಲ್ ಸೂಚನೆ
Tuesday, November 03, 2026
ಉಡುಪಿ ನಗರಸಭೆಯ ಬೈಲೂರು ವಾರ್ಡಿನಲ್ಲಿ ಒಳಚರಂಡಿ ಕಾಮಗಾರಿಯಿಂದ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟುಮಾಡಿರುವ ಅಮ್ಮಣ್ಣಿ ರಾಮಣ್ಣ ಸಭಾಭವನದಿಂದ ಚಿಟ್ಪಾಡಿ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸಿ ಡಾಮರೀಕರಣ ಮಾಡುವಂತೆ ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿ ನಗರಸಭೆ ನಿಧಿಯಿಂದ ಸುಮಾರು 97 ಲಕ್ಷ ರೂ. ವೆಚ್ಚದಲ್ಲಿ ಪಿಪಿಸಿ ಕಾಲೇಜು, ಅಮ್ಮಣ್ಣಿ ರಾಮಣ್ಣ ಸಭಾಭವನದಿಂದ ಚಿಟ್ಪಾಡಿ ಭಾಗದ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ, ಕಾಮಗಾರಿ ವೇಳೆ ಕೆಲವು ಕಡೆ ಬಂಡೆ ಸಿಕ್ಕಿರುವುದರಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು, ಸ್ಥಳೀಯರು ವ್ಯಾಪಕ ಧೂಳಿನ ಸಮಸ್ಯೆಯನ್ನೂ ಎದುರಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕ ಯಶ್‌ಪಾಲ್ ಸುವರ್ಣ, ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಕೂಡಲೇ ಮುಖ್ಯ ರಸ್ತೆಯ ಡಾಮರೀಕರಣ ಕಾಮಗಾರಿ ಆರಂಭಿಸಬೇಕು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಕಿರಣ್ ಕುಮಾರ್ ಬೈಲೂರು, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ರತ್ನಾಕರ ಶೇರಿಗಾರ್, ವಸಂತ ರಾಜ್ ಚಂದನ್, ರಮೇಶ್, ರಂಜಿತ್, ನಿತಿನ್ ಪೈ, ಮನ್ಸುಖ್ ಲಾಲ್ ಪಟೇಲ್, ನಗರಸಭೆ ಇಂಜಿನಿಯರ್ ದಿವಾಕರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
