ಕನ್ನಡತನ ಬಳಸಿ ಬದುಕು ಕಟ್ಟಿಕೊಳ್ಳೋಣ: ಡಾ. ನರೇಂದ್ರ ಕುಮಾರ್
ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗದೆ, ಪ್ರತಿದಿನವೂ ಕನ್ನಡವನ್ನು ಬಳಸುವ ಮೂಲಕ ನಿತ್ಯೋತ್ಸವವಾಗಬೇಕು. ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದುಕು ಕಟ್ಟಿಕೊಳ್ಳೋಣ ಎಂದು ಸುನಾಗ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ನರೇಂದ್ರ ಕುಮಾರ್ ಎಚ್.ಎಸ್. ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಎಂಜಿಎಂ ಕಾಲೇಜಿನ ಸಮೀಪದ ರಿಕ್ಷಾ ನಿಲ್ದಾಣದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹಸ್ತಾಂತರಿಸಿ ಅವರು ಮಾತನಾಡಿದರು. ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಜೀವನ ಪದ್ಧತಿ. ಕನ್ನಡವನ್ನು ನಿತ್ಯದ ಬದುಕಿನಲ್ಲಿ ಬಳಸುವ ಮೂಲಕ ಭಾಷೆಯ ಅಸ್ಮಿತೆಯನ್ನು ಉಳಿಸಿ ಬೆಳೆಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ನಾರಾಯಣ ಮಡಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕವು ಕಳೆದ ಐದು ವರ್ಷಗಳಲ್ಲಿ ಮಾಡಿರುವ ಸಾಧನೆ ಶ್ಲಾಘನೀಯ. ಕನ್ನಡ ತಾಯಿ ಭಾಷೆಯಾಗಿ ಇತರ ಭಾಷೆಗಳ ಬೆಳವಣಿಗೆಗೂ ಪ್ರೇರಣೆ ನೀಡುತ್ತಿದೆ. ಕನ್ನಡವನ್ನು ಬೆಳೆಸಬೇಕಾದರೆ ಪ್ರತಿಯೊಬ್ಬರೂ ಅದನ್ನು ಹೆಚ್ಚು ಹೆಚ್ಚು ಬಳಸಬೇಕು ಎಂದು ಹೇಳಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಪದಾಧಿಕಾರಿಗಳಾದ ದೀಪಾ ಚಂದ್ರಕಾಂತ್, ಸಿದ್ದಬಸಯ್ಯಸ್ವಾಮಿ ಚಿಕ್ಕಮಠ, ಸುಶಾಂತ್ ಕೆರೆಮಠ, ಅನಿತಾ ಡಿಸೋಜ, ಉಪನ್ಯಾಸಕಿ ಅನಿತಾ ಸಿಕ್ವೇರಾ, ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಉಪಾಧ್ಯಕ್ಷ ಇಮ್ತಿಯಾಜ್, ಮನೋಜ್ ಕಡಬ, ಶೆರ್ಲಿ ಮನೋಜ್, ಸುಮಿತ್ರಾ ಕೆರೆಮಠ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.