ಸಮುದ್ರಕ್ಕೆ ಬಿದ್ದ ಮೀನುಗಾರನ ರಕ್ಷಣೆ: ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಕೋಸ್ಟ್ ಗಾರ್ಡ್
ಮೀನುಗಾರಿಕಾ ಬಲೆ ಎಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮಂಗಳೂರಿನಲ್ಲಿ ಸಮುದ್ರಕ್ಕೆ ಬಿದ್ದ ಮೀನುಗಾರರೊಬ್ಬರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಸಮುದ್ರಕ್ಕೆ ಬಿದ್ದ ಮೀನುಗಾರನನ್ನು ಕೋಮರ ರಾಮು ಎಂದು ಗುರುತಿಸಲಾಗಿದೆ.
ನವೆಂಬರ್ 1ರಂದು ಮಂಗಳೂರಿನಿಂದ ಸುಮಾರು 54 ನಾಟಿಕಲ್ ಮೈಲು ದೂರದಲ್ಲಿ ‘ಶಿವ ಸಾಗರ್’ ಹೆಸರಿನ ಮೀನುಗಾರಿಕಾ ದೋಣಿ ಮೀನುಗಾರಿಕೆಯಲ್ಲಿ ತೊಡಗಿತ್ತು. ಈ ವೇಳೆ ಬಲೆ ಎಳೆಯುತ್ತಿದ್ದ ಮೀನುಗಾರರೊಬ್ಬರು ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದಾರೆ. ತಕ್ಷಣವೇ ದೋಣಿಯಲ್ಲಿದ್ದ ಇತರ ಮೀನುಗಾರರು ಅವರನ್ನು ನೀರಿನಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಅವರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲು ನೆರವು ಕೋರಿದ್ದರು.
ದೋಣಿಯಿಂದ ಬಂದ ತುರ್ತು ಕರೆಯನ್ನು ಸ್ವೀಕರಿಸಿದ ಕೋಸ್ಟ್ ಗಾರ್ಡ್‌ನ CGDHQ-3 ಅಧಿಕಾರಿಗಳು ತಕ್ಷಣವೇ ‘ICGS C-448’ ನೌಕೆಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದರು. ಮಧ್ಯರಾತ್ರಿಯ ದಟ್ಟ ಕತ್ತಲಿನ ನಡುವೆಯೂ ಕಾರ್ಯಾಚರಣೆ ನಡೆಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ಮೀನುಗಾರಿಕಾ ದೋಣಿಯನ್ನು ಪತ್ತೆಹಚ್ಚಿ, ಆತಂಕದಲ್ಲಿದ್ದ ಮೀನುಗಾರನನ್ನು ಸುರಕ್ಷಿತವಾಗಿ ರಕ್ಷಿಸಿದರು. ಬಳಿಕ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದರು. ನಂತರ ರಕ್ಷಿಸಲ್ಪಟ್ಟ ಮೀನುಗಾರನನ್ನು ನ್ಯೂ ಮಂಗಳೂರು ಬಂದರು ಪ್ರಾಧಿಕಾರದ ಜೆಟ್ಟಿಗೆ ಕರೆತಂದು, ಅಲ್ಲಿಂದ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.