‘ಶ್ರೀರಾಮಚಂದ್ರ’ನಾಗಿ ತೆರೆಮುಂದೆ ಬರುತ್ತಿದ್ದಾರೆ ‘ಸು ಫ್ರಮ್ ಸೋ’ ಖ್ಯಾತಿಯ ರವಿಯಣ್ಣ
‘ಸು ಫ್ರಮ್ ಸೋ’ ಚಿತ್ರದ ಮೂಲಕ ರವಿ ಅಣ್ಣನ ಪಾತ್ರದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ನಟ ಶನಿಲ್ ಗೌತಮ್ ಇದೀಗ ನಾಯಕನಾಗಿ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ. ಹೊಸ ಚಿತ್ರ ‘ಶ್ರೀರಾಮಚಂದ್ರ’ನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
‘ಸು ಫ್ರಮ್ ಸೋ’ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ರವಿ ಅಣ್ಣನಾಗಿ ಕಾಣಿಸಿಕೊಂಡಿದ್ದ ಶನಿಲ್ ಗೌತಮ್ ತಮ್ಮ ಸಹಜ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಇದೀಗ ನಾಯಕ ನಟನಾಗಿ ಹೊಸ ಪ್ರಯತ್ನಕ್ಕೆ ಕೈಹಾಕಿರುವ ಅವರು, ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ.
ಶನಿಲ್ ಗೌತಮ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಶನಿಲ್ ಗೌತಮ್ ಬಿಳಿ ಬಣ್ಣದ ಅಂಬಾಸಿಡರ್ ಕಾರಿನ ಮೇಲೆ ಕುಳಿತಿದ್ದು, ಸುತ್ತಲಿನವರು ಕಾರನ್ನು ತಳ್ಳುತ್ತಿರುವ ದೃಶ್ಯ ಗಮನ ಸೆಳೆಯುತ್ತದೆ. ಶ್ರೀರಾಮನ ಹೆಸರಿನ ಚಿತ್ರವಾಗಿದ್ದರೂ, ಪೋಸ್ಟರ್‌ನಲ್ಲಿ ಅವರು ಮದುವೆ ಗಂಡಿನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.
ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸುತ್ತಿದ್ದು, ನಿರ್ಮಾಪಕ ಉದಯ್ ಕೆ. ಮೆಹ್ತಾ ಕಥೆ ಒದಗಿಸಿದ್ದಾರೆ. ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶನಿಲ್ ಗೌತಮ್ ಹಾಗೂ ನಿರ್ದೇಶಕ ಚಂದ್ರಮೋಹನ್ ಜಂಟಿಯಾಗಿ ರಚಿಸಿದ್ದಾರೆ.
ಪ್ರಕಾಶ್ ತೂಮಿನಾಡ್, ದೀಪಕ್ ರೈ ಪಾಣಾಜೆ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ‘ಸು ಫ್ರಮ್ ಸೋ’ ಚಿತ್ರದ ಯಶಸ್ಸಿನ ಬಳಿಕ ನಾಯಕನಾಗಿ ಶನಿಲ್ ಗೌತಮ್ ಅವರ ಹೊಸ ಪ್ರಯತ್ನ ಹೇಗಿರಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ.