-->
 ಜ್ಯೋತಿಷ್ಯ ಶಾಸ್ತ್ರ ಜೀವನಕ್ಕೆ ಭರವಸೆ, ಮಾರ್ಗದರ್ಶನ ನೀಡುವ ಶಕ್ತಿ ಹೊಂದಿದೆ: ಕಾಣಿಯೂರು ಶ್ರೀ

ಜ್ಯೋತಿಷ್ಯ ಶಾಸ್ತ್ರ ಜೀವನಕ್ಕೆ ಭರವಸೆ, ಮಾರ್ಗದರ್ಶನ ನೀಡುವ ಶಕ್ತಿ ಹೊಂದಿದೆ: ಕಾಣಿಯೂರು ಶ್ರೀ


ಮನುಷ್ಯನ ಜೀವನದಲ್ಲಿ ದುಃಖ ಹಾಗೂ ಸಂಕಷ್ಟಗಳು ಎದುರಾದಾಗ ಭರವಸೆ ಮತ್ತು ಬೆಳಕನ್ನು ನೀಡುವ ಶಕ್ತಿ ಜ್ಯೋತಿಷ್ಯ ಶಾಸ್ತ್ರಕ್ಕಿದೆ. ವಿಜ್ಞಾನ ಇಂದು ತಿಳಿಸುತ್ತಿರುವ ಅನೇಕ ವಿಚಾರಗಳನ್ನು ಜ್ಯೋತಿಷ್ಯ ಶಾಸ್ತ್ರವು ತನ್ನ ಜ್ಞಾನ ಪರಂಪರೆಯ ಮೂಲಕ ಹಿಂದೆಯೇ ತಿಳಿಸಿಕೊಟ್ಟಿದೆ ಎಂದು ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.


ಅವರು ಉಡುಪಿ ಎಸ್.ಎಂ.ಎಸ್.ಪಿ. ಸಂಸ್ಕೃತ ಮಹಾವಿದ್ಯಾಲಯದ ಭೀಮ ಸಭಾಂಗಣದಲ್ಲಿ ನಡೆದ ‘ಜ್ಯೋತಿರ್ವಿಜ್ಞಾನಂ’ ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ವಿಜ್ಞಾನಕ್ಕೆ ಕೊನೆಯಿಲ್ಲದಂತೆ ಜ್ಯೋತಿಷ್ಯ ಶಾಸ್ತ್ರಕ್ಕೂ ಮಿತಿಯಿಲ್ಲ. ಇದು ಆಳವಾದ ಅಧ್ಯಯನ ಮತ್ತು ಚಿಂತನೆಗೆ ಅರ್ಹವಾದ ಶಾಸ್ತ್ರವಾಗಿದೆ. ವ್ಯಕ್ತಿಯ ಭವಿಷ್ಯದ ಕುರಿತು ತಿಳಿಸುವುದರ ಜತೆಗೆ ಜೀವನಕ್ಕೆ ಮಾರ್ಗದರ್ಶನ ನೀಡುವ ಈ ಶಾಸ್ತ್ರದ ಬಗ್ಗೆ ಇನ್ನಷ್ಟು ಅಧ್ಯಯನ ಹಾಗೂ ಚಿಂತನೆಗಳು ನಡೆಯಬೇಕಿದೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಅಮೃತೇಶ್ ಆಚಾರ್ಯ ಡಿ.ಎಸ್. ಮಾತನಾಡಿ, ವಿದೇಶಿ ಶಿಕ್ಷಣ ಪದ್ಧತಿಯ ಪ್ರಭಾವದಿಂದ ಭಾರತೀಯ ಜ್ಯೋತಿಷ್ಯ ಜ್ಞಾನ ಪರಂಪರೆಯ ಬಗ್ಗೆ ತಪ್ಪು ಕಲ್ಪನೆಗಳು ಮೂಡಿವೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ವಿಜ್ಞಾನಿಗಳೂ ಇದ್ದರು, ವೈಜ್ಞಾನಿಕ ಸಂಶೋಧನೆಗಳೂ ನಡೆದಿದ್ದವು. ಋಷಿಮುನಿಗಳೇ ಪ್ರಾಚೀನ ವಿಜ್ಞಾನಿಗಳಾಗಿದ್ದು, ಅವರ ಸಂಶೋಧನೆಗಳು ಅಪಾರವಾಗಿವೆ. ವೇದಗಳಲ್ಲಿಯೇ ಅನೇಕ ವೈಜ್ಞಾನಿಕ ವಿಚಾರಗಳು ಅಡಕವಾಗಿವೆ ಎಂದು ಹೇಳಿದರು.

ಸೂರ್ಯನ ಗುರುತ್ವಾಕರ್ಷಣೆಯ ಪ್ರಭಾವದಿಂದ ಆಕಾಶಕಾಯಗಳು ಚಲಿಸುತ್ತವೆ ಎಂಬ ವಿಚಾರವನ್ನು ಆಧುನಿಕ ವಿಜ್ಞಾನಿಗಳು ಉಪಕರಣಗಳ ಮೂಲಕ ಅಧ್ಯಯನ ಮಾಡುತ್ತಿದ್ದರೆ, ನಮ್ಮ ಋಷಿಮುನಿಗಳು ತಮ್ಮ ಸೂಕ್ಷ್ಮ ಅವಲೋಕನ ಮತ್ತು ಜ್ಞಾನದಿಂದಲೇ ಇಂತಹ ವಿಚಾರಗಳನ್ನು ಗುರುತಿಸಿದ್ದರು. ಪೂರ್ವಜರು ಅರಿತಿದ್ದ ಅನೇಕ ಸಂಗತಿಗಳನ್ನು ಇಂದು ಆಧುನಿಕ ಉಪಕರಣಗಳ ನೆರವಿನಿಂದ ಅಧ್ಯಯನ ಮಾಡಲಾಗುತ್ತಿದೆ. ವೇದ ಮತ್ತು ಶಾಸ್ತ್ರಗಳಲ್ಲಿರುವ ವೈಜ್ಞಾನಿಕ ಅಂಶಗಳ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವ ಅಗತ್ಯವಿದೆ. ಬೂದಿ ಮುಚ್ಚಿದ ಕೆಂಡದಂತಿರುವ ಪ್ರಾಚೀನ ಜ್ಞಾನಸಂಪತ್ತಿನ ಮೇಲಿನ ಧೂಳನ್ನು ಕೊಡವಿ, ಅದರ ವೈಜ್ಞಾನಿಕ ಔಚಿತ್ಯವನ್ನು ಅರಿಯಬೇಕಿದೆ ಎಂದರು.

ನಿಟ್ಟೆ ವಿಶ್ವವಿದ್ಯಾಲಯದ ಸಿಐಕೆಎಸ್ ನಿರ್ದೇಶಕ ಪ್ರೊ. ಸುಧೀರ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಎಸ್. ಮೂಡಿತ್ತಾಯ, ಉಡುಪಿ ಕೆನರಾ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಟಿ.ಎಸ್.ಎನ್. ಪೂರ್ಣಾನಂದ, ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ನಿವೃತ್ತ ಜ್ಯೋತಿಷ್ಯ ಪ್ರಾಧ್ಯಾಪಕ ಪ್ರೊ. ಎ. ಶ್ರೀಪಾದ್ ಭಟ್, ಎಸ್.ಎಂ.ಎಸ್.ಪಿ. ಸಭಾದ ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ, ಡಾ. ಬಿ. ಗೋಪಾಲಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಜ್ಯೋತಿಷ್ಯ ವಿಭಾಗದ ಮುಖ್ಯಸ್ಥ ಪ್ರೊ. ಡಿ. ಶಿವಪ್ರಸಾದ್ ತಂತ್ರಿ ಸ್ವಾಗತಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ನುಕ್ಸರ್ ನಿರ್ದೇಶಕ ಪ್ರೊ. ಅನಿರ್ಬಾನ್ ಚಕ್ರವರ್ತಿ ವಂದಿಸಿದರು.

Ads on article

Advertise in articles 1

advertising articles 2

Advertise under the article