
Jammu: ಭಾರೀ ಮಳೆ ಹಿನ್ನೆಲೆ;ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ
17/07/2025 07:08 AM
ಕಳೆದ 36 ಗಂಟೆಗಳಿ0ದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಗಂಡೇರ್ಬಲ್ ಜಿಲ್ಲೆಯ ಯಾತ್ರೆಯ ಬಾಲ್ಟಾಲ್ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ, ಮಹಿಳಾ ಯಾತ್ರಿಕರೊಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ವರದಿಯಾಗಿದೆ. ಅಲ್ಲದೆ, ಕಣಿವೆನಾಡಿನ ಹಲವೆಡೆ ಧಾರಾಕಾರ ವರ್ಷಧಾರೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು, ಜುಲೈ 17ರಂದು ಗುರುವಾರ ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗದಲ್ಲಿ ಯಾತ್ರೆಯು ಸ್ಥಗಿತಗೊಂಡಿದೆ. ಎರಡೂ ಮಾರ್ಗದಲ್ಲಿ ಮತ್ತೆ ಸಂಚಾರ ಆರಂಭಕ್ಕೆ ದುರಸ್ತಿ ಕಾರ್ಯ ಸಾಗಿದೆ. ದುರಸ್ತಿ ಪೂರ್ಣಗೊಂಡ ಬಳಿಕ ಈ ಎರಡೂ ಮಾರ್ಗದಲ್ಲಿನ ಯಾತ್ರೆಗೆ ಮತ್ತೆ ಚಾಲನೆ ನೀಡಲಾಗುವುದು ಎಂದು ಕಾಶ್ಮೀರ ವಿಭಾಗಿಯ ಕಮಿಷನರ್‌ವಿಜಯ್ ಕುಮಾರ್ ಬಿದುರಿ ತಿಳಿಸಿದ್ದಾರೆ. ಜುಲೈ16ರಂದು ಪಂಜ್ತಾಮಿ ಶಿಬಿರದಲ್ಲಿ ತಂಗಿದ್ದ ಯಾತ್ರಿಕರಿಗೆ ಬಿಆರ್‌ಒ ಮತ್ತು ಪರ್ವತ ರಕ್ಷಣಾ ತಂಡಗಳ ನಿಯೋಜನೆಯ ಬೆಂಬಲಗೊAದಿಗೆ ಬಾಲ್ಟಾಲ್‌ನತ್ತ ಸಾಗಲು ಅವಕಾಶ ನೀಡಲಾಗುತ್ತಿದೆ. ನಾಳೆಯಿಂದ ಮತ್ತೆ ಯಾತ್ರೆ ಪುನಾರಂಭವಾಗುವ ಸಾಧ್ಯತೆ ಇದೆ. ಹವಾಮಾನ ಮತ್ತು ಮಳೆ ಮುನ್ಸೂಚನೆ ಅರಿತುಕೊಂಡು, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 3ರಿಂದ ಪ್ರಾರಂಭವಾದ ಅಮರನಾಥ ಯಾತ್ರೆಯಲ್ಲಿ ಇದುವರೆಗೆ 2.47 ಲಕ್ಷ ಯಾತ್ರಿಕರು ಗುಹಾಂತರ ದೇಗುಲದಲ್ಲಿನ ಶಿವಲಿಂಗದ ದರ್ಶನ ಪಡೆದಿದ್ದಾರೆ. ಈ ಬಾರಿ 4 ಲಕ್ಷ ಜನರು ಯಾತ್ರೆಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. 38 ದಿನಗಳ ವರೆಗೆ ನಡೆಯುವ ಪವಿತ್ರ ಯಾತ್ರೆಯು ಆಗಸ್ಟ್ 9ರಂದು ಮುಕ್ತಾಯವಾಗಲಿದೆ.