
Kasaragodu:ಭಾರೀ ಮಳೆ: ಮನೆಯ ಪಾರ್ಶ್ವಕ್ಕೆ ಗುಡ್ಡ ಕುಸಿತ; ಭಾಗಶಃ ಹಾನಿ
17/07/2025 07:34 AM
ಭಾರೀ ಮಳೆಯಿಂದಾಗಿ ಮನೆಯ ಪಾರ್ಶ್ವಕ್ಕೆ ಗುಡ್ಡ ಕುಸಿದು ಮನೆಗೆ ಭಾಗಶಃ ಹಾನಿಯಾದ ಘಟನೆ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ಸಮೀಪ ಸಂಭವಿಸಿದೆ. ಚಂದ್ರಗಿರಿ ನಡಕ್ಕಾಲ್‌ನ ಮಿತೇಶ್ ಎಂಬವರ ಮನೆ ಸಮೀಪದ ಗುಡ್ಡವು ಜುಲೈ 16 ರಾತ್ರಿ ಕುಸಿದಿದ್ದು, ಬೃಹತ್ ಕಲ್ಲು ಸಹಿತ ಮಣ್ಣು ಮನೆಯ ಒಂದು ಪಾರ್ಶ್ವಕ್ಕೆ ಬಿದ್ದಿದೆ. ಅವಘಡದಿಂದ ಮನೆಯ ಒಂದು ಕೊಠಡಿ ಸಂಪೂರ್ಣ ಹಾನಿಗೊಳಗಾಗಿದ್ದು, ಮನೆ ಭಾಗಶಃ ಹಾನಿಗೊಂಡಿದೆ. ಮನೆಯಲ್ಲಿ ನಾಲ್ವರು ವಾಸಿಸುತ್ತಿದ್ದು, ಗುಡ್ಡ ಕುಸಿತದ ಸದ್ದು ಕೇಳಿ ಹೊರಗೆ ಓಡಿ ಬಂದಿದ್ದಾರೆ. ಹೀಗಾಗಿ ಸಂಭಾವ್ಯ ಪ್ರಾಣಹಾನಿ ತಪ್ಪಿದೆ.