Mangalore: ಕೆಎಸ್‌ಆರ್‌ಟಿಸಿಯಿಂದ ವೋಲ್ವೋ ಬಸ್‌ಗಳು; ಅಂಬಾರಿ ಉತ್ಸವ್  ಬಸ್ಸುಗಳಿಗೆ ಐವನ್ ಡಿ'ಸೋಜಾ ಚಾಲನೆ

Mangalore: ಕೆಎಸ್‌ಆರ್‌ಟಿಸಿಯಿಂದ ವೋಲ್ವೋ ಬಸ್‌ಗಳು; ಅಂಬಾರಿ ಉತ್ಸವ್ ಬಸ್ಸುಗಳಿಗೆ ಐವನ್ ಡಿ'ಸೋಜಾ ಚಾಲನೆ


ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವತಿಯಿಂದ ಎರಡು ಹೊಸ ವೋಲ್ವೊ ಮಲ್ಟಿ ಅಕ್ಸಲ್ ಸೀಟರ್ ಬಸ್‌ಗಳು ಮತ್ತು ಮೂರು ಹೊಸ ಅಂಬಾರಿ ಉತ್ಸವ್ ಹವಾನಿಯಂತ್ರಿತ ಸ್ಲೀಪರ್ ಬಸ್‌ಗಳಿಗೆ ವಿಭಾಗದ ಬಿಜೈ ನಿಲ್ದಾಣದಲ್ಲಿ ಚಾಲನೆ ದೊರೆಯಿತು. 

ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಐವನ್ ಡಿ'ಸೋಜಾ ಅವರು, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಈ ವಿಷಯವನ್ನು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು. ಮಂಗಳೂರು ವಿಭಾಗವು ಸುಮಾರು 6.5 ಎಕರೆ ಭೂಮಿಯನ್ನು ಹೊಂದಿದ್ದು, ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಇದನ್ನು ಅಭಿವೃದ್ಧಿಪಡಿಸಬಹುದು. ಈ ಕುರಿತಾಗಿ ಸಾರಿಗೆ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. 

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, ವಿಭಾಗದಿಂದ ಇದೇ ಮೊದಲ ಬಾರಿಗೆ ಹಗಲಿನ ವೇಳೆ ಮಂಗಳೂರು ಮತ್ತು ಬೆಂಗಳೂರು ನಡುವೆ ಹವಾನಿಯಂತ್ರಿತ ಸ್ಲೀಪರ್ ಬಸ್ ಕಾರ್ಯನಿರ್ವಹಿಸಲಿದೆ. ಮಂಗಳೂರು-ಬೆ0ಗಳೂರು ಅಂಬಾರಿ ಉತ್ಸವ್ ಬಸ್ಸು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಿಂದ ಹೊರಟು ರಾತ್ರಿ 8:30 ರ ವೇಳೆಗೆ ಬೆಂಗಳೂರು ತಲುಪಲಿದೆ. ಮಂಗಳೂರು-ಬೆಂಗಳೂರು ಮಲ್ಟಿ ಅಕ್ಸಲ್ 2.0 ಸೀಟರ್ ಬಸ್ಸು ಮಂಗಳೂರಿನಿ0ದ ಬೆಳಿಗ್ಗೆ ಹೊರಟು ಸಂಜೆ 5:30 ರ ವೇಳೆಗೆ ಬೆಂಗಳೂರು ತಲುಪಲಿದೆ. ಇದೇ ಮೊದಲ ಬಾರಿಗೆ ಪುತ್ತೂರು-ಸುಳ್ಯ-ಮಡಿಕೇರಿ ಮಾರ್ಗವಾಗಿ ಎಸಿ ಸ್ಲೀಪರ್ ಬಸ್ ಸೇವೆ ಆರಂಭವಾಗಲಿದೆ ಎಂದು ಹೇಳಿದರು.

ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಮಂಗಳೂರು ತಾಲೂಕು ಅಧ್ಯಕ್ಷ ಸುರೇಂದ್ರ ಕಾಂಬಳಿ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಎಸ್. ಅಪ್ಪಿ, ಕೆಎಸ್‌ಆರ್‌ಟಿಸಿ ವಿಭಾಗೀಯ ಟ್ರಾಫಿಕ್ ಅಧಿಕಾರಿ ಕಮಲ್ ಕುಮಾರ್, ಸಹಾಯಕ ಸಂಚಾರ ವ್ಯವಸ್ಥಾಪಕಿ ನಿರ್ಮಲಾ, ಡಿಪೋ ಮ್ಯಾನೇಜರ್ ಪ್ರೀತ ಕುಮಾರಿ ಮತ್ತು ಡಿಪೋ 3 ಮ್ಯಾನೇಜರ್ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.





Ads on article

Advertise in articles 1

advertising articles 2

Advertise under the article