Bangalore: ಸಾರಿಗೆ ನೌಕರರ ಬೇಡಿಕೆಗೆ ಸ್ಪಂಧಿಸಲು ಸಾರಿಗೆ ಸಂಘಟನೆಗಳೊಂದಿಗೆ ಸಿಎಂ ಸಭೆ
04/08/2025
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಚರ್ಚಿಸಲು ಆ. 4ರಂದು ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು.
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಾರಿಗೆ ನೌಕರರ ಸಂಘಟನೆಗಳು ಆ. 5ಕ್ಕೆ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತಿಯಲ್ಲಿ ಸಾರಿಗೆ ನಿಗಮಗಳ ನೌಕರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಯಿತು.
38 ತಿಂಗಳ ವೇತನ ಹಿಂಬಾಕಿ, ವೇತನ ಪರಿಷ್ಕರಣೆ, 2021ರ ಮುಷ್ಕರದ ವೇಳೆ ವಜಾ ಮಾಡಲಾದ ನೌಕರರ ಮರು ನೇಮಕಕ್ಕೆ ಆಗ್ರಹಿಸಿ ಆ. 5ರಂದು ಮುಷ್ಕರಕ್ಕೆ ಕರೆ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸಂಘಟನೆಗಳ ಮುಖಂಡರ ಸಭೆ ನಡೆಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.