
New Delhi: 17 ಸಾವಿರ ಕೋಟಿ ಹಣ ದುರ್ಬಳಕೆ ಆರೋಪ; ಇಡಿ ಮುಂದೆ ಅನಿಲ್ ಅಂಬಾನಿ ಹಾಜರು
05/08/2025
17,000 ಕೋಟಿ ರೂಪಾಯಿ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿದ ಬೆನ್ನಲ್ಲೇ ಉದ್ಯಮಿ ಅನಿಲ್ ಅಂಬಾನಿ ನವದೆಹಲಿಯಲ್ಲಿರುವ ಇ.ಡಿ. ಕಚೇರಿಗೆ ಹಾಜರಾದರು.
ಸಾಲ ವಂಚನೆ ಪ್ರಕರಣದ ವಿಚಾರಣೆಯ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ವಿರುದ್ಧ ಇ.ಡಿ. ಲುಕ್ ಔಟ್ ನೋಟಿಸ್ ಹೊರಡಿಸಿತ್ತು. ಈ ಮೂಲಕ ತನಿಖೆಯ ವೇಳೆ ದೇಶ ತೊರೆಯದಂತೆ ಸೂಚನೆ ನೀಡಿತ್ತು.ದೆಹಲಿಯಲ್ಲಿರುವ ಇ.ಡಿ ಕಚೇರಿಗೆ ಬೆಳಿಗ್ಗೆ 10:50ಕ್ಕೆ ಉದ್ಯಮಿ ಅನಿಲ್ ಅಂಬಾನಿ ಅವರು ಆಗಮಿಸಿದ್ದರು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಅನಿಲ್ ಅವರ ಹೇಳಿಕೆಗಳನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
3 ಸಾವಿರ ಕೋಟಿ ಮೊತ್ತದ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಅನಿಲ್ ಅಂಬಾನಿ ಒಡೆತನದ 50ಕ್ಕೂ ಹೆಚ್ಚು ಕಂಪನಿಗಳ ಮುಂಬೈ ಮತ್ತು ದೆಹಲಿಯಲ್ಲಿನ ಕಚೇರಿಗಳ ಮೇಲೆ ಜುಲೈ 24 ರಂದು ಏಕಕಾಲದಲ್ಲಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಆಗಸ್ಟ್ 5ರಂದು ವಿಚಾರಣೆಗೆ ಹಾಜರಾಗುವಂತೆ ಅನಿಲ್ ಅಂಬಾನಿ ಅವರಿಗೆ ಇ.ಡಿ ಸಮನ್ಸ್ ಜಾರಿ ಮಾಡಿತ್ತು.