
Bangalore: ಧರ್ಮಸ್ಥಳ ಕೆಟ್ಟ ಪ್ರದೇಶ, ರೆಡ್ ಅಲರ್ಟ್ ಘೋಷಿಸಿ; ಸುಭಾಷಿಣಿ ಅಲಿ ಪ್ರಚೋದನಕಾರಿ ಹೇಳಿಕೆ
ಧರ್ಮಸ್ಥಳ ಅತೀ ಕೆಟ್ಟ ಪ್ರದೇಶ. ಅಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿ ಎಂದು ಮಾಜಿ ಸಂಸದೆ ಸುಭಾಷಿಣಿ ಅಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ಬಳ್ಳಾರಿ ಮುಗಿಸಿದ್ದೇವೆ. ಹಾಸನ ಮುಗಿಸಿದ್ದೇವೆ. ಇನ್ನು ಧರ್ಮಸ್ಥಳವನ್ನೂ ಮುಗಿಸುತ್ತೇವೆ ಎಂದಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಹಾಸನದಲ್ಲಿ ಹೋರಾಟ ಮಾಡಿ ಜೈಲು ಸೇರುವಂತೆ ಮಾಡಿದ್ದೇವೆ. ಹಾಸನದಲ್ಲಿ ಒಬ್ಬ ವ್ಯಕ್ತಿಯಿಂದ ಸಮಾಜ ಹಾಳಾಗಿದೆ. ಅಂತದ್ದೇ ವ್ಯವಸ್ಥೆ ಧರ್ಮಸ್ಥಳದಲ್ಲೂ ಇದೆ. ಮನುವಾದ ಇರುವ ಧರ್ಮಸ್ಥಳದಲ್ಲಿ ಹಣ ಬಲ, ಜನ ಬಲ ತೋಳ್ ಬಲ ಬಳಸಿಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ. ಮನುವಾದವನ್ನು ಭಾರತದಿಂದ ಓಡಿಸಬೇಕಿದೆ ಎಂದಿದ್ದಾರೆ.
ದಲಿತರು ತಮ್ಮ ಆಸ್ತಿಗಾಗಿ ಹೋರಾಟ ಮಾಡಬೇಕಿದೆ. ಮನುವಾದವೇ ಹಾಗೆ ದಲಿತರು ಜಮೀನು ಹೊಂದಿರಬಾರದು ಎಂಬುವುದು ಅವರ ಉದ್ದೇಶ. ಧರ್ಮಸ್ಥಳ, ಆರ್ಎಸ್ಎಸ್ ಕೂಡ ಅದನ್ನೇ ಮಾಡುತ್ತಿದೆ ಎಂದು ಕಿಡಿ ಕಾರಿದರು. ಧರ್ಮಸ್ಥಳದಲ್ಲಿ ಮಹಿಳೆಯರು ಹತ್ಯೆಯಾಗುತ್ತಿದ್ದಾರೆ. ಆದರೆ ಹೇಗೆ ಸಾವನ್ನಪ್ಪಿದರು ಎಂಬುವುದೇ ಗೊತ್ತಾಗುತ್ತಿಲ್ಲ. ಇಂತಹ ಕೃತ್ಯ ಮಾಡುವವರನ್ನು ಹಾಗೆಯೇ ಬಿಡಬಾರದು. ಇಂತವರ ವಿರುದ್ಧ ಹೋರಾಟ ಮಾಡಿ ನ್ಯಾಯ ಪಡೆಯಬೇಕಿದೆ ಎಂದರು.
ಧರ್ಮಸ್ಥಳದಲ್ಲಿ ಶವಗಳು ಪತ್ತೆಯಾಗಿವೆ. ಪೊಲೀಸರು ಹಾಗೂ ಸರ್ಕಾರಕ್ಕೆ ಅನೇಕ ಹತ್ಯೆಗಳಾಗುತ್ತಿರುವುದು ಮತ್ತು ನಾಪತ್ತೆಯಾಗುತ್ತಿರುವುದು ಗೊತ್ತಿದೆ. ಆದರೂ ಏನೂ ಗೊತ್ತಿಲ್ಲದವರಂತೆ ಸುಮ್ಮನಿದ್ದಾರೆ. ಧರ್ಮಸ್ಥಳ ಅತೀ ಕೆಟ್ಟ ಪ್ರದೇಶವಾಗಿದ್ದು, ರಾಜ್ಯಸರ್ಕಾರವು ಧರ್ಮಸ್ಥಳವನ್ನು ರೆಡ್ ಅಲರ್ಟ್ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.