
Mangalore: ಮಾದಕ ವಸ್ತು ಹೊಂದಿದ್ದ ಇಬ್ಬರ ಬಂಧನ; 99,000 ಮೌಲ್ಯದ ಸೊತ್ತುಗಳ ವಶ
ಮಾದಕ ವಸ್ತು ಅಫೀಮು ಹೊಂದಿದ್ದ ವ್ಯಕ್ತಿ ಮತ್ತು ಆತನಿಗೆ ಪೂರೈಕೆ ಮಾಡುತ್ತಿದ್ದ ಆರೋಪಿ ಸೇರಿ ಇಬ್ಬರನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿ0ದ ಒಟ್ಟು 174 ಗ್ರಾಂ ತೂಕದ ಕಪ್ಪು ಬಣ್ಣದ ಅಫೀಮು ಸೇರಿದಂತೆ 99,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ರಾಜಸ್ಥಾನದ ಜಲೋರೊ ಜಿಲ್ಲೆಯ ಸಾಂಚೋರ ತಾಲೂಕಿನ ಕಬೂತರ್ ಕೊ ಚಬೂತರ್ ಬಡವಾಲ ಗ್ರಾಮದವರಾದ, ಪ್ರಸ್ತುತ ಭಗವತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ವಾಸುದೇವ ಅಲಿಯಾಸ್ ಸ್ಯಾನ್ (48) ಮತ್ತು ರಾಜಸ್ಥಾನ ಮೂಲದವರೇ ಆದ, ಕುದ್ರೋಳಿಯ ಅಪಾರ್ಟ್ಮೆಂಟ್ ಬಳಿ ವಾಸಿಸುತ್ತಿರುವ ಮಂಗಲ್ ಚೌಧರಿ (45) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಆಧರಿಸಿ, ಬರ್ಕೆ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿನಾಯಕ ತೋರಗಲ್ ಮತ್ತು ಅವರ ತಂಡವು ಕೊಡಿಯಾಲಬೈಲು ಭಗವತಿನಗರದ ಗುಜರಾತಿ ಶಾಲೆಯ ಹಿಂಭಾಗಕ್ಕೆ ತೆರಳಿ ವಾಸುದೇವನನ್ನು ಪತ್ತೆ ಹಚ್ಚಿದ್ದಾರೆ. ಶೋಧ ನಡೆಸಿದಾಗ, ಅವನ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ನ ಕವರ್ ಒಳಗೆ ಅಫೀಮು ಅಡಗಿಸಿಟ್ಟಿರುವುದು ಕಂಡುಬAದಿದೆ. ವಿಚಾರಣೆ ವೇಳೆ, ವಾಸುದೇವನು ಈ ವಸ್ತುವನ್ನು ಮಂಗಲ್ ಚೌಧರಿಯಿಂದ ಪಡೆದಿರುವುದಾಗಿ ಬಹಿರಂಗಪಡಿಸಿದ್ದು, ನಂತರ ಮಂಗಲ್ ಚೌಧರಿಯನ್ನೂ ವಶಕ್ಕೆ ಪಡೆಯಲಾಗಿದೆ.
ಪೊಲೀಸರು ವಾಸುದೇವನಿಂದ 9,000 ರೂ. ಮೌಲ್ಯದ 174 ಗ್ರಾಂ ತೂಕದ ದ್ರವರೂಪದ ಅಫೀಮು, 40,000 ರೂ. ನಗದು, ಒಂದು ಮೊಬೈಲ್ ಫೋನ್ ಮತ್ತು 50,000 ರೂ. ಮೌಲ್ಯದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.. ವಶಪಡಿಸಿಕೊಂಡ ಒಟ್ಟು ವಸ್ತುಗಳ ಮೌಲ್ಯ 99,000 ರೂಪಾಯಿ ಆಗಿದೆ.
ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರೂ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.