
Kundapura: ಮಳೆ ನೀರು ತುಂಬಿದ್ದ ತೋಡಿಗೆ ಬಿದ್ದು ಕಾರ್ಮಿಕ ಯುವಕ ಮೃತ್ಯು
Friday, September 26, 2025
ಮಳೆ ನೀರು ತುಂಬಿದ್ದ ತೋಡಿಗೆ ಬಿದ್ದು ಕಾರ್ಮಿಕ ಯುವಕನೊಬ್ಬ ಮೃತಪಟ್ಟ ಘಟನೆ ಕುಂದಾಪುರದ ನೆ ಬೇಳೂರು ಗ್ರಾಮದ ಚಾಮ್ತಾಡಿ ಕೈಲೇರಿ ಬಳಿ ನಡೆದಿದೆ. ಮೃತರನ್ನು ಅಚ್ಲಾಡಿ ಅಂಬೇಡ್ಕರ್ ಕಾಲೋನಿಯ ನಿವಾಸಿ ಶರತ್ (32) ಎಂದು ಗುರುತಿಸಲಾಗಿದೆ.
ಶರತ್ ಅವರು ಅಚ್ಲಾಡಿಯಲ್ಲಿ ಗುತ್ತಿಗೆದಾರರೊಬ್ಬರೊಂದಿಗೆ ತೆಂಗಿನ ತೋಟದಲ್ಲಿ ಕೆಲಸಕ್ಕೆ ತೆರಳಿದ್ದರು. ಮರದಿಂದ ತೆಂಗಿನಕಾಯಿ ಕೊಯ್ದು ಟೆಂಪೋಗೆ ತುಂಬಿಸುವ ಕಾರ್ಯದಲ್ಲಿ ತೊಡಗಿದ್ದ ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಬಳಿಕ ಎಲ್ಲೆಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಮರುದಿನ ಮಧ್ಯಾಹ್ನ ಕೈಲೇರಿ ಸಮೀಪದ ತೋಡಿನಲ್ಲಿ ಶರತ್ ಅವರ ಮೃತದೇಹ ಪತ್ತೆಯಾಗಿದೆ.
ಸೆ. 24ರಂದು ಸುರಿದ ಭಾರಿ ಮಳೆಯಿಂದಾಗಿ ಹೊಳೆಯು ತುಂಬಿ ಹರಿಯುತ್ತಿತ್ತು. ಸುತ್ತಮುತ್ತಲ ರಸ್ತೆಗಳೂ ಕೂಡ ಕೆಸರಿನಿಂದ ತುಂಬಿ ಸಂಚರಿಸಲು ಅಸಾಧ್ಯ ಸ್ಥಿತಿ ಇತ್ತು. ಟೆಂಪೋಗೆ ತೆಂಗಿನಕಾಯಿಗಳನ್ನು ಸಾಗಿಸುವ ವೇಳೆ ಶರತ್ ಆಕಸ್ಮಿಕವಾಗಿ ಕಾಲು ಜಾರಿ, ಯಾರ ಗಮನಕ್ಕೂ ಬಾರದೆ ತೋಡಿಗೆ ಬಿದ್ದು, ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಕೋಟಾ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್, ಎಎಸ್‌ಐ ರವಿ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.