
Chikmagalur: ಅಕ್ರಮವಾಗಿ ಪಿಎಸ್ಸೈ ಹುದ್ದೆ ಗಿಟ್ಟಿಸಿಕೊಂಡ ಆರೋಪ: ಚಿಕ್ಕಮಗಳೂರು ಎಸ್ಪಿಗೆ ದೂರು
ಚಿಕ್ಕಮಗಳೂರು ಜಿಲ್ಲೆಯ ಕಳಸ ಪೊಲೀಸ್ ಠಾಣೆಯಲ್ಲಿ ಪಿಎಸ್ಸೈ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಪತ್ನಿಗೆ ಕಿರುಕುಳ ನೀಡಿದ್ದ ಆರೋಪದಲ್ಲಿ ಕರ್ತವ್ಯದಿಂದ ಅಮಾನತುಗೊಂಡಿದ್ದ ಪಿಎಸ್ಸೈ ಪಿ.ಡಿ.ನಿತ್ಯಾನಂದಗೌಡ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ.
2005-06ನೇ ಸಾಲಿನಲ್ಲಿ ಪಿಎಸ್ಸೈ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಿತ್ಯಾನಂದ ಗೌಡ ಅವರು ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆ ಪಡೆದು ಅಕ್ರಮವಾಗಿ ಸರಕಾರಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಈ ಸಂಬ0ಧ ತನಿಖೆ ನಡೆಸಿ ಆರೋಪಿಯನ್ನು ಸೇವೆಯಿಂದ ವಜಾ ಮಾಡುವುದರೊಂದಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಪಂ ಕೆಡಿಪಿ ಸದಸ್ಯ, ಕಳಸ ಬ್ಲಾಕ್ ಕಾಂಗ್ರೆಸ್ ಮುಖಂಡ ಮುಹಮ್ಮದ್ ರಫೀಕ್ ಎಂಬವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಎಸ್ಪಿಗೆ ಕಚೇರಿಗೆ ಆಗಮಿಸಿ ದೂರು ನೀಡಿರುವ ರಫೀಕ್, ನಿತ್ಯಾನಂದಗೌಡ ಅವರು ಪಿಎಸ್ಸೈ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಪಶ್ನೆ ಪತ್ರಿಕೆ ಪಡೆದು ಪರೀಕ್ಷೆ ಬರೆದು ಸರಕಾರಿ ಹುದ್ದೆ ಗಿಟ್ಟಿಸಿಕೊಂಡಿರುವುದು, ಭ್ರಷ್ಟಾಚಾರ ನಡೆಸಿರುವುದು, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಅವರ ಪತ್ನಿ ಈ ಹಿಂದೆಯೇ ಕಳಸ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ದೂರಿನ ಮೇರೆಗೆ ನಿತ್ಯಾನಂದಗೌಡ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿತ್ತು.
ಸದ್ಯ ನಿತ್ಯಾನಂದಗೌಡ ಅವರು ಪಿಎಸ್ಸೈ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಸರಕಾರಿ ಹುದ್ದೆ ಗಿಟ್ಟಿಸಿಕೊಂಡಿರುವ ಬಗ್ಗೆ ದಿವ್ಯಾ ಎಂಬವರ ಜೊತೆ ನಡೆಸಿರುವ ಮೊಬೈಲ್ ಸಂಭಾಷಣೆಯಲ್ಲಿ ಬೆಳಕಿಗೆ ಬಂದಿದೆ. ಈ ಮೊಬೈಲ್ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಈ ಮೊಬೈಲ್ ಸಂಭಾಷಣೆ ಆಧಾರದಲ್ಲಿ ನಿತ್ಯಾನಂದ ಗೌಡ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.