
Puttur: ಭ್ರಷ್ಟಾಚಾರ ಪ್ರಕರಣ; ತಹಶೀಲ್ದಾರ್ ಎಸ್.ಬಿ. ಕೂಡಲಗಿ ಜಾಮೀನು ಅರ್ಜಿ ತಿರಸ್ಕೃತ
Friday, September 26, 2025
ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪುತ್ತೂರು ತಾಲೂಕು ತಹಶೀಲ್ದಾರ್ ಎಸ್.ಬಿ. ಕೂಡಲಗಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಜಾಮೀನು ನಿರಾಕರಿಸಿದೆ.
ಜಮೀನಿನ ನಿರಾಕ್ಷೇಪಣಾ ಪತ್ರಕ್ಕೆ ಲಂಚ ಪಡೆದ ಆರೋಪಕ್ಕೆ ಸಂಬ0ಧಿಸಿ ತಹಶೀಲ್ದಾರ್ ಎಸ್.ಬಿ. ಕೂಡಲಗಿ ವಿರುದ್ಧ ಆ.28ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2025ರಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪುತ್ತೂರು ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಸುನೀಲ್ ಕುಮಾರ್ ಎಸ್.ಎಂ ಹಾಗೂ ತಹಶೀಲ್ದಾರ್ ಎಸ್.ಬಿ. ಕೂಡಲಗಿ ವಿರುದ್ಧ ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ 2018) ಅಡಿಯಲ್ಲಿ ಆರೋಪಗಳು ದಾಖಲಿಸಲಾಗಿತ್ತು.
ಟ್ರ‍್ಯಾಪ್ ಕಾರ್ಯಾಚರಣೆಯ ವೇಳೆ, ಪ್ರಥಮ ದರ್ಜೆ ಸಹಾಯಕ ಸುನಿಲ್ ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ ತಹಶೀಲ್ದಾರ್ ಕೂಡಲಗಿ ತಲೆಮರೆಸಿಕೊಂಡಿದ್ದರು. ಬಳಿಕ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.