
Kaup: ಹೊಸ ಮಾರಿಗುಡಿಯಲ್ಲಿ ನವದುರ್ಗಾ ಲೇಖನ ಯಜ್ಞದ ಪುಣ್ಯ ಭೂಮಿಗೆ ಚಾಲನೆ
Thursday, September 25, 2025
ಶರನ್ನವರಾತ್ರಿ ಮಹೋತ್ಸವದ 4 ದಿನವಾದ ಸೆಪ್ಟೆಂಬರ್ 25ರಂದು ಬೆಳಿಗ್ಗೆ ಕಾಪುವಿನ ನವದುರ್ಗಾ ಲೇಖನ ಯಜ್ಞ ಮಂಟಪದಲ್ಲಿ ನವದುರ್ಗಾ ಲೇಖನವನ್ನು ಬರೆಯಲು "ಲೇಖನ ಯಜ್ಞದ ಪುಣ್ಯ ಭೂಮಿ"ಗೆ ಚಾಲನೆ ನೀಡಲಾಯಿತು.
ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕೊರಂಗ್ರಪಾಡಿ ಕೆ. ಪಿ ಕುಮಾರಗುರು ತಂತ್ರಿ ಮತ್ತು ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ ಇವರ ಉಪಸ್ಥಿತಿಯಲ್ಲಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಸಮಕ್ಷಮದಲ್ಲಿ ಚಾಲನೆ ನೀಡಲಾಯಿತು.
ಕಾಪುವಿನ ಅಮ್ಮ ನೂತನ ದೇವಳದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೊದಲು ತಾತ್ಕಾಲಿಕ ಸಾನಿಧ್ಯದಲ್ಲಿ ನೆಲೆಯಾಗಿದ್ದು, ಅದೇ ಜಾಗದಲ್ಲಿ ಇದೀಗ ನವದುರ್ಗಾ ಲೇಖನ ಮಂಟಪ ರಚನೆಯಾಗಿದ್ದು, ವಿಶೇಷವಾಗಿ ಲೇಖನವನ್ನು 9 ದಿನಗಳವರೆಗೆ ಸಾನಿಧ್ಯದಲ್ಲೇ ಬರೆಯಲು ಅಥವಾ ಒಂದು ದಿನ ದೇವಳದಲ್ಲಿಯೇ ಬರೆದು ನಂತರದ ದಿನಗಳನ್ನು ಮನೆಯಲ್ಲಿ ಪೂರೈಸಿ ಲೇಖನ ಪುಸ್ತಕವನ್ನು ಶಾಶ್ವತ ಸೇವೆಯ ಸಹಿತವಾಗಿ ದೇವಳಕ್ಕೆ ಸಮರ್ಪಿಸುವ ಪುಣ್ಯಾವಕಾಶವನ್ನು ದೇವಳದ ಅಭಿವೃದ್ಧಿ ಸಮಿತಿಯಿಂದ ಒದಗಿಸಲಾಗಿದೆ.
ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ, ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಮತ್ತು ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗಿಶ್ ವಿ. ಶೆಟ್ಟಿ, ಧಾರ್ಮಿಕ ಸಮಿತಿಯ ಪ್ರಧಾನ ಸಂಚಾಲಕ ಭಗವಾನ್ ದಾಸ್ ಶೆಟ್ಟಿಗಾರ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಕೋಶಾಧಿಕಾರಿ ಕೆ. ವಿಶ್ವನಾಥ್, ಮಹಿಳಾ ಪ್ರಧಾನ ಸಂಚಾಲಕ ಸಾವಿತ್ರಿ ಗಣೇಶ್ ಮತ್ತು ಆರ್ಥಿಕ ಸಮಿತಿಯ ಸಂಚಾಲಕ ಸುನಿಲ್ ಎಸ್. ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.